ಕೊಯಮತ್ತೂರು, ಜುಲೈ 29,2023(www.justkannada.in):ಎಫ್ ಎಂ ಎಸ್ ಸಿಐ ಭಾರತೀಯ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಶಿಪ್ (ಐಎನ್ಆರ್ಸಿ)ನ 3ನೇ ಸುತ್ತು ರ್ಯಾಲಿ ಆಫ್ ಕೊಯಮತ್ತೂರು ಜುಲೈ 29 ಮತ್ತು 30ರಂದು (ಶನಿವಾರ ಹಾಗೂ ಭಾನುವಾರ) ನಡೆಯಲಿದ್ದು, ಬರೋಬ್ಬರಿ 76 ಕಾರುಗಳು ಸ್ಪರ್ಧಿಸಲಿವೆ. ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಇದೊಂದು ದಾಖಲೆ ಎನಿಸಿದ್ದು, ಮೋಟಾರ್ ಸ್ಪೋರ್ಟ್ಸ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
7 ಬಾರಿ ರಾಷ್ಟ್ರೀಯ ಚಾಂಪಿಯನ್ ದೆಹಲಿಯ ಗೌರವ್ ಗಿಲ್ ಜೊತೆ ಕರ್ನಾಟಕದ 50ಕ್ಕೂ ಹೆಚ್ಚು ಚಾಲಕರು ಹಾಗೂ ಸಹ-ಚಾಲಕರು (ನ್ಯಾವಿಗೇಟರ್) ಸ್ಪರ್ಧೆಯಲ್ಲಿದ್ದಾರೆ. ಹಿರಿಯ ಹಾಗೂ ಅನುಭವಿಗಳಾದ ಐಎನ್ ಆರ್ ಸಿ ಚಾಂಪಿಯನ್ ಕರ್ಣ ಕಡೂರ್, ಅಶ್ವಿನ್ ನಾಯ್ಕ್, ನಿಕಿಲ್ ಪೈ, ಪಿ.ವಿ. ಶ್ರೀನಿವಾಸ್ ಮೂರ್ತಿ, ಡೀನ್ ಮ್ಯಾಸ್ಕಾರೇನಸ್, ಗಗನ್ ಕೆ. ಸೇರಿ ಇನ್ನೂ ಅನೇಕರು ಕಣದಲ್ಲಿದ್ದಾರೆ.
2023ರ ಐಎನ್ ಆರ್ಸಿ ಚಾಂಪಿಯನ್ ಶಿಪ್ನ ಮೊದಲ ಸುತ್ತು ಚೆನ್ನೈನಲ್ಲಿ, 2ನೇ ಸುತ್ತು ಅರುಣಾಚಲ ಪ್ರದೇಶದಲ್ಲಿ ನಡೆದಿತ್ತು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಇನ್ನೂ 4 ಸುತ್ತು ಬಾಕಿ ಇದೆ. 4ನೇ ಸುತ್ತು ಹೈದರಾಬಾದ್, 5ನೇ ಸುತ್ತು ಬೆಂಗಳೂರಲ್ಲಿ ನಡೆಯಲಿದ್ದು, 6ನೇ ಸುತ್ತು ನಡೆಯುವ ಸ್ಥಳ ಇನ್ನೂ ನಿಗದಿಯಾಗಿಲ್ಲ.
ವೇಮ್ಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ರ್ಯಾಲಿಯಲ್ಲಿ ಸ್ಪರ್ಧಿಸುತ್ತಿರುವ ತಂಡಗಳು, ಚಾಲಕರನ್ನು ಬೆಂಬಲಿಸಲು ಮುಂದೆ ಬಂದಿದ್ದು, ಭಾರತೀಯ ಮೋಟಾರ್ ಸ್ಪೋರ್ಟ್ಸ್ ನ ದಿಕ್ಕನ್ನೇ ಬದಲಿಸುತ್ತಿದೆ.
ವಿಎಂ ಫೌಂಡೇಶನ್ ಈ ಸುತ್ತಿನ ಗ್ರಿಡ್ ನಲ್ಲಿರುವ ಶೇ.50ರಷ್ಟು ಅಂದರೆ 37 ತಂಡಗಳನ್ನು ಬೆಂಬಲಿಸುತ್ತಿದೆ. ಅಗ್ರ ತಂಡಗಳಾದ ಏಮಿಫೀಲ್ಡ್ ಲಿಯಿಂಗ್, ಆರ್ಕ್ ಮೋಟಾರ್ ಸ್ಪೋರ್ಟ್ಸ್, ಚೆಟ್ಟಿನಾಡ್ ಸ್ಪೋರ್ಟಿಂಗ್ ಹಾಗೂ ಅಗ್ರ ಚಾಲಕರಾದ ಮಾಜಿ ಐಎನ್ ಆರ್ ಸಿ ಚಾಂಪಿಯನ್ ಚೇತನ್ ಶಿವರಾಮ್, ಪ್ರಿನ್ಸ್ (ಮಣೀಂದರ್ ಸಿಂಗ್) ಹಾಗೂ ಐಮನ್ ಅಹ್ಮದ್ ರ್ಯಾಲಿಯಲ್ಲಿ ಸ್ಪರ್ಧಿಸಲಿದ್ದಾರೆ.
ಮೋಟಾರ್ ಸ್ಪೋರ್ಟ್ಸ್ ಅಂದರೆ ನನಗೆ ಬಹಳ ಅಚ್ಚುಮೆಚ್ಚು ಎಂದಿರುವ ವಿಎಂ ಸ್ಪೋರ್ಟ್ಸ್ ಫೌಂಡೇಶನ್ ನ ಅಧ್ಯಕ್ಷರಾದ ವೇಮ್ಸಿ ಮೆರ್ಲಾ, 2019ರ ಭಾರತೀಯ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಶಿಪ್ ಸೇರಿ ಈ ಹಿಂದೆಯೂ ನಾನು ಹಲವು ಎಫ್ ಎಂಎಸ್ ಸಿಐ ಕಾರ್ಯಕ್ರಮಗಳಿಗೆ ಪ್ರಾಯೋಜಕನಾಗಿದ್ದೆ. ಭಾರತದ ಶ್ರೇಷ್ಠ ಲಿಯಿಸ್ಟ್ಗಳು ಹಣದ ಬಗ್ಗೆ ಚಿಂತಿಸದೆ ತಮ್ಮ ಕನಸನ್ನು ಈಡೇರಿಸಿಕೊಳ್ಳಬೇಕೆನ್ನುವ ಉದ್ದೇಶದಿಂದಲೇ ನಾನು ಈ ಫೌಂಡೇಶನ್ ಆರಂಭಿಸಿದ್ದೇನೆ ಎಂದು ಮೆರ್ಲಾ ಅವರು ತಮ್ಮ ಉದ್ದೇಶವನ್ನು ತಿಳಿಸಿದ್ದಾರೆ.
ವೇಮ್ಸಿ ಮೆರ್ಲಾ ಸ್ವತಃ ರ್ಯಾಲಿಯಲ್ಲಿ ಸ್ಪರ್ಧಿಸುತ್ತಿದ್ದು, ಇದು ಅವರ ಮೊದಲ ಪ್ರಯತ್ನವಾಗಿದೆ. ಜಿಪ್ಸಿ ಕಪ್ ನಲ್ಲಿ ಅವರು ಕಣಕ್ಕಿಳಿಯಲಿದ್ದು, ರಘುರಾಮ್ ಸಾಮಿನಾಥನ್ ನ್ಯಾವಿಗೇಟರ್ ಆಗಲಿದ್ದಾರೆ.
ವೇಮ್ಸಿ ಫೌಂಡೇಶನ್ ನಿಂದ ಸಿಕ್ಕಿರುವ ಬೆಂಬಲದ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಕೊಯಮತ್ತೂರು ಆಟೋ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಪೃಥ್ವಿರಾಜ್, ವಿಎಂ ಫೌಂಡೇಶನ್ ನಿಂದಾಗಿ ಐಎನ್ ಆರ್ಸಿಎಗೆ ದೊಡ್ಡ ನೆರವು ಸಿಕ್ಕಿದೆ. ಪ್ರತಿ ವರ್ಷ ಆರ್ಥಿಕ ಸಂಕಷ್ಟದಿಂದಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಹಲವು ಚಾಲಕರು ಹಿಂದೆ ಸರಿಯುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಅವರೆಲ್ಲರೂ ಕಣಕ್ಕಿಳಿಯಲಿದ್ದಾರೆ. ಈ ಸಲ ಸ್ಪರ್ಧಾ ಕಣ ಬಹಳಷ್ಟು ಪೈಪೋಟಿಯಿಂದ ಕೂಡಿರಲಿದ್ದು, ಅತಿರೋಚಕ ಪೈಪೋಟಿಗೆ ಸಾಕ್ಷಿಯಾಗಲಿದ್ದೇವೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
Key words: More than 50 -Kannadigas -participate – Coimbatore rally-76 cars –race