ಮೈಸೂರು,ಡಿ,14,2019(www.justkannada.in): ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಗಟ್ಟಿಯಾಗುತ್ತಿದ್ದಂತೆ ಏಳು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರ ಇಲ್ಲದೆ ಚಡಪಡಿಸುತ್ತಿದ್ದ ಮುಖಂಡರ ಮೊಗದಲ್ಲಿ ಸಂತಸ ಮೂಡಿಸಿದ್ದು,ಹಳೆಯ ಮೈಸೂರು ಪ್ರಾಂತ್ಯದ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯ ಮೇಲೆ ಹಲವರ ಕಣ್ಣು ಬಿದ್ದಿದೆ.
ಸರಕಾರ ನೂರು ದಿನ ಪೂರೈಸಿದ ಬೆನ್ನಲ್ಲೇ ಮೈಸೂರು ವಿವಿ ಸೇರಿ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ಸಿಂಡಿಕೇಟ್ ಸದಸ್ಯರ ನೇಮಕ ಮಾಡಿದ್ದು, ಸ್ಥಳೀಯ ಮುಖಂಡರಲ್ಲಿ ಉತ್ಸಾಹ, ಚಟುವಟಿಕೆ ತರಿಸಿದೆ. ಇದರ ಬೆನ್ನಲ್ಲೇ ಸಚಿವ ಸಂಪುಟ ಪುನರ್ ರಚನೆ ಹೊತ್ತಿನಲ್ಲೇ ನಿಗಮ ಮಂಡಳಿಗೂ ಅಧ್ಯಕ್ಷರನ್ನ ನೇಮಿಸುವ ಮುನ್ಸೂಚನೆ ಸಿಕ್ಕಿರುವುದರಿಂದ ಹಲವರು ಅಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು ಶುರು ಮಾಡಿದ್ದಾರೆ.
ಮುಡಾ ಅಧ್ಯಕ್ಷ ಸ್ಥಾನಕ್ಕೆ ಐದಕ್ಕೂ ಹೆಚ್ಚು ಮಂದಿ ಕಣ್ಣಿಟ್ಟಿದ್ದಾರೆ. ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೂ ಆಂತರಿಕ ಕಚ್ಚಾಟ, ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಅನೇಕರು ಜೈಲು ಪಾಲಾಗಿದ್ದರಿಂದ ಮೂರು ಸಿಎಂ ಕಾಣಬೇಕಾಯಿತು. ಇದರಿಂದಾಗಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದವರಿಗೂ ಸರಿಯಾದ ಸಮಯ ಸಿಗಲಿಲ್ಲ. ಕೆಲವರಿಗೆ ಅವಕಾಶ ಸಿಕ್ಕಿದರೂ ಸಮಯ ಕಡಿಮೆ ಇತ್ತು. ನಂತರ, ಸರಕಾರ ಪತನವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ವರ್ಷ ಆಡಳಿತ ನಡೆಸಿದರೆ, ದೋಸ್ತಿ ಸರಕಾರ ಹದಿನಾಲ್ಕು ತಿಂಗಳು ಆಡಳಿತ ನಡೆಸಿತ್ತು. ಈಗ ಏಳು ವರ್ಷದ ಬಳಿಕ ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಜತೆಗೆ ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದು ಸ್ಥಿರವಾಗಿ ನಿಂತಿದೆ. ಇದರ ಬೆನ್ನಲ್ಲೇ ಹಲವು ವಿವಿಗಳಿಗೆ ಎಬಿವಿಪಿಯಲ್ಲಿ ಕೆಲಸ ಮಾಡುತ್ತಿದ್ದವರು ಸೇರಿ ಇತರ ನಾಯಕರ ಹಿಂಬಾಲಕರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸುವ ಮೂಲಕ ಅಧಿಕಾರ ಕಲ್ಪಿಸಿಕೊಟ್ಟಿದೆ.
ಅಧ್ಯಕ್ಷಗಿರಿಯತ್ತ ಹಲವರ ಪೈಪೋಟಿ….
ಹಳೆಯ ಮೈಸೂರು ಪ್ರಾಂತ್ಯದಲ್ಲಿ ಇರುವ ಕರ್ನಾಟಕ ಮೃಗಾಲಯ ಪ್ರಾಧಿಕಾರ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಅರಗು ಮತ್ತು ಬಣ್ಣದ ಕಾರ್ಖಾನೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ ಅಭಿವೃದ್ಧಿ ಪ್ರಾಧಿಕಾರ, ಮುಡಾ, ನಗರಪಾಲಿಕೆ ನಾಮನಿರ್ದೇಶಿತ ಸದಸ್ಯರು, ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸೇರಿ ಇನ್ನಿತರ ರಾಜ್ಯ ಸಚಿವ ಸಂಪುಟದರ್ಜೆಯ ಸ್ಥಾನಮಾನದ ಅಧ್ಯಕ್ಷಗಿರಿ ಇದೆ.
ಮೈಸೂರಿನಲ್ಲಿ ಹಲವು ವರ್ಷದಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿರುವ ಮೈ.ವಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಸುರೇಶಬಾಬು, ಎಂ.ಎ.ಮೋಹನ್, ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಗ್ರಾಮಾಂತರ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಜಿಲ್ಲಾ ಉಪಾಧ್ಯಕ್ಷ ಎಸ್.ಮಹದೇವಯ್ಯ, ಸಹ ಪ್ರಭಾರಿ ಎನ್.ವಿ.ಫಣೀಶ್, ರಾಜ್ಯ ಸ್ಲಂ ಮೋರ್ಚ ಕಾರ್ಯದರ್ಶಿ ಆರ್.ರಘು, ಎಚ್.ಜಿ.ಗಿರಿಧರ್, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಅಪ್ಪಣ್ಣ,ಮಾಜಿ ಶಾಸಕರಾದ ಸಿದ್ದರಾಜು, ಸಿ.ರಮೇಶ್, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,ಗ್ರಾಮಾಂತರ ಜಿಲ್ಲಾ ಮಾಜಿ ಅಧ್ಯಕ್ಷ ಹೇಮಂತಕುಮಾರಗೌಡ ಮೊದಲಾದವರು ಅಧ್ಯಕ್ಷ,ಪ್ರಮುಖ ನಿಗಮಮಂಡಳಿಗಳ ನಿರ್ದೇಶಕರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷ ಸಂಘಟನೆ ಜತೆಗೆ ಹಲವು ವರ್ಷದಿಂದ ಯಡಿಯೂರಪ್ಪ ಹಾಗೂ ಎಲ್.ಸಂತೋಷ್ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡರು ತಮ್ಮದೇ ಆದ ರೀತಿಯಲ್ಲಿ ನಿಗಮ ಮಂಡಳಿಯಲ್ಲಿಸ್ಥಾನ ಪಡೆಯಲು ತಮ್ಮ ನಾಯಕರ ಮನೆಗೆ ಎಡತಾಕಲು ಶುರು ಮಾಡಿದ್ದಾರೆ.
ಮುಡಾ ಅಧ್ಯಕ್ಷಗಿರಿ ಮೇಲೆ ಐದಾರು ಜನರ ಕಣ್ಣು…
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನ ಶೀಘ್ರದಲ್ಲೇ ನೇಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಐದಾರು ಜನರ ಕಣ್ಣು ಬಿದ್ದಿದೆ. ಕಳೆದ ಬಾರಿ ಮುಡಾ ಅಧ್ಯಕ್ಷ ಸ್ಥಾನ ತಪ್ಪಿಸಿಕೊಂಡಿದ್ದ ಎಚ್.ವಿ.ರಾಜೀವ್ ಜತೆಗೆ ಟಿ.ಎಸ್.ಶ್ರೀವತ್ಸ, ಎಂ.ಎ.ಮೋಹನ್ ಕಣ್ಣು ಬಿದ್ದಿದೆ. ಶಾಸಕ ಎಸ್.ಎ.ರಾಮದಾಸ್ ತಮ್ಮ ಆಪ್ತರಿಗೆ ಕೊಡಿಸಲು ಮುಂದಾಗುವ ಸಾಧ್ಯತೆ ಇರುವ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಅವರ ಮೂಲಕವೇ ಗಿಟ್ಟಿಸಲು ಹೊರಟಿದ್ದಾರೆ. ವಿಧಾನ ಪರಿಷತ್ ಸ್ಥಾನದ ಆಸೆ ಕೆಲವರಿಗೆ ಇದ್ದರೂ ಸದ್ಯದ ಮಟ್ಟಿಗೆ ಅದು ಆಕಾಶಕ್ಕೆ ಕೈ ತೋರಿ ನಿಲ್ಲುವಂತಾಗಿದೆ. ಹಾಗಾಗಿಯೇ ಸಿಗಬಹುದಾದ ನಿಗಮ ಮಂಡಳಿಯಲ್ಲೇ ಶಕ್ತಿಯುತವಾಗಿರುವ ಮುಡಾ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಸದ್ದಿಲ್ಲದೆ ಯತ್ನ ನಡೆಸಿರುವುದನ್ನು ಗಮನಿಸಬಹುದಾಗಿದೆ.
Key words: More than -five member- president-race-muda-mysore