ಬೆಂಗಳೂರು:ಜೂ-13: ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಸೀಟು ಪಡೆಯಲು ಮುಗಿಬೀಳುತ್ತಿದ್ದ ಪಾಲಕ, ಪೋಷಕರು ಈ ವರ್ಷ ಸೀಟು ಲಭ್ಯವಾದರೂ ಮಕ್ಕಳನ್ನು ಸೇರಿಸಿಲ್ಲ. ಆರ್‌ಟಿಇ ಅಡಿ ಸೀಟು ಹಂಚಿಕೆಯಾದ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಲಭ್ಯ ಕಳಪೆಯಾಗಿರುವುದರಿಂದ ಪಾಲಕ, ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ.
ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ ಸುಮಾರು 17 ಸಾವಿರ ಸೀಟುಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಎರಡು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. ಸೀಟು ಪಡೆದವರಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸದೆ ತಿರಸ್ಕರಿಸಿದ್ದೇ ಹೆಚ್ಚಿದೆ.
2012-13ರಲ್ಲಿ ರಾಜ್ಯದಲ್ಲಿ ಆರ್‌ಟಿಇ ಅನುಷ್ಠಾನ ಮಾಡಲಾಯಿತು. ಈಗ ರಾಜ್ಯ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ನಿಯಮಕ್ಕೆ ಕೆಲ ಬದಲಾವಣೆ ತಂದು 2019-20ನೇ ಸಾಲಿಗೆ ಆರ್‌ಟಿಇ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿಯಲ್ಲಿ ಮಾತ್ರ ಪ್ರವೇಶ ಕಲ್ಪಿಸಿದೆ.
ಇದರನ್ವಯ ನಗರ ಪ್ರದೇಶದಲ್ಲಿ ವಾರ್ಡ್ ಅಥವಾ ಗ್ರಾಮೀಣ ಭಾಗದ ಕಂದಾಯ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಶಾಲೆಗೆ ಆರ್‌ಟಿಇ ಅಡಿ ಮಕ್ಕಳನ್ನು ದಾಖಲಿಸಲು ಅವಕಾಶ ಇಲ್ಲ. ಹೀಗಾಗಿ, 2018-19ರಲ್ಲಿ ಆರ್‌ಟಿಇ ಅಡಿ 1.11 ಲಕ್ಷ ಮಕ್ಕಳು ಆರ್‌ಟಿಇ ಅಡಿಯಲ್ಲಿ ಸೀಟು ಪಡೆದಿದ್ದರು. ಈ ವರ್ಷ ಅದು 4,600ಕ್ಕೆ ಇಳಿದಿದೆ.
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮಧುಗಿರಿ, ಉಡುಪಿ, ಬೀದರ್, ಶಿರಸಿ ಸಹಿತವಾಗಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 17,720 ಸೀಟುಗಳು ಆರ್‌ಟಿಇ ಅಡಿಯಲ್ಲಿ 2019-20ನೇ ಸಾಲಿಗೆ ಖಾಸಗಿ ಶಾಲೆಯಲ್ಲಿ ಲಭ್ಯವಿದ್ದವು.
ಮೊದಲ ಸುತ್ತಿನಲ್ಲಿ ಆನ್‌ಲೈನ್ ಲಾಟರಿ ಮೂಲಕ 7,636 ಹಾಗೂ 2ನೇ ಸುತ್ತಿನಲ್ಲಿ ಆನ್‌ಲೈನ್ ಲಾಟರಿ ಮೂಲಕ 2,583 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. ಮೊದಲ ಸುತ್ತಿನಲ್ಲಿ ಸೀಟು ಪಡೆದ 7,636 ಮಕ್ಕಳಲ್ಲಿ ಕೇವಲ 3,797 ಮಕ್ಕಳು ಮಾತ್ರ ದಾಖಲಾತಿ ಪಡೆದಿದ್ದಾರೆ.
ಎರಡನೇ ಸುತ್ತಿನಲ್ಲಿ ಸೀಟು ಪಡೆದ 2,583 ಮಕ್ಕಳಲ್ಲಿ 891 ಮಕ್ಕಳು ಮಾತ್ರ ಸಂಬಂಧಿಸಿದ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ. ಎರಡು ಸುತ್ತಿನಲ್ಲಿ ಹಂಚಿಕೆಯಾಗಿರುವ ಒಟ್ಟು 10,219 ಸೀಟುಗಳಲ್ಲಿ ಕೇವಲ 4,688 ಸೀಟುಗಳು ಮಾತ್ರ ಭರ್ತಿಯಾಗಿವೆ. 5,531 ಸೀಟುಗಳಿಗೆ ಪಾಲಕ, ಪೋಷಕರು ಮಕ್ಕಳನ್ನು ಸೇರಿಸದೇ, ತಿರಸ್ಕರಿಸಿದ್ದಾರೆ.
ಪಾಲಕರ ಹಿಂದೇಟಿಗೆ ಕಾರಣಗಳು
– ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗಿಂತಲೂ ಅತ್ಯಂತ ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇರುವ ಖಾಸಗಿ ಶಾಲೆಗಳಾಗಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕಿದ್ದಾರೆ.
– ಕೆಲವು ಕಡೆ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿದ್ದು, ಅನುದಾನಿತ ಶಾಲೆಗಳಿಗೆ ಸೀಟು ಹಂಚಿಕೆ ಮಾಡಿದ್ದರಿಂದ ಪಾಲಕರು ಮಕ್ಕಳನ್ನು ಅಂತಹ ಶಾಲೆಗೆ ದಾಖಲಿಸಿಲ್ಲ.
– ಖಾಸಗಿ ಶಾಲೆಯ ಶಿಕ್ಷಣ ಗುಣಮಟ್ಟದ ಜತೆಗೆ, ವ್ಯವಸ್ಥೆ ಚೆನ್ನಾಗಿಲ್ಲದೇ ಇರುವುದರಿಂದ ಪಾಲಕ, ಪೋಷಕರು ತಮ್ಮ ಮಕ್ಕಳನ್ನು ಆರ್‌ಟಿಇ ಅಡಿಯಲ್ಲಿ ಅಂತಹ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ.
ಜಿಲ್ಲಾವಾರು ಮಾಹಿತಿ
ಜಿಲ್ಲೆ – ಲಭ್ಯ ಸೀಟು – ಭರ್ತಿಯಾದ ಸೀಟು
ಬಾಗಲಕೋಟೆ – 1134 -369
ಬೆಂಗಳೂರು ಉತ್ತರ – 644 -44
ಬೆಂಗಳೂರು ದಕ್ಷಿಣ- 1262 -544
ಬೀದರ್ – 1027 -100
ಚಿಕ್ಕೋಡಿ – 1465 – 404
ದಾವಣಗೆರೆ -1052 -261
ಕಲಬುರಗಿ – 1375 – 296
ಮೈಸೂರು – 969 -469
ಉಡುಪಿ – 317 -30
ದಕ್ಷಿಣ ಕನ್ನಡ – 448 -54
ವಿಜಯಪುರ – 1063 -269
ರಾಜ್ಯದ ಖಾಸಗಿ ಶಾಲೆಯಲ್ಲಿ ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳ ವರ್ಷವಾರು ಮಾಹಿತಿ
ವರ್ಷ ಮಕ್ಕಳು
2012-13 – 49,282.
2013-14ರ – 73,108.
2014-15 – 93,690.
2015-16 – 1,00,000.
2016-17 – 97,971.
2017-18 – 1,08,000.
2018-19 – 1,11,000.
ಪ್ರಸ್ತುತ ಸುಮಾರು 6 ಲಕ್ಷಕ್ಕೂ ಅಧಿಕ ಮಕ್ಕಳು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕೃಪೆ:ಉದಯವಾಣಿ