ಬೆಂಗಳೂರು, ಸೆಪ್ಟಂಬರ್, 18,2020(www.justkannada.in): ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ಅವರ ನಿಧನ ತೀವ್ರ ಆಘಾತ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದಿದ್ದಾರೆ.
ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ಬಗ್ಗೆ ಮಾತನಾಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಸೂಕ್ಷ್ಮ ಬರವಣಿಗೆಯ ಹಾಗೂ ಚಿಂತನೆಯ ಬರಹಗಾರರೂ ಆಗಿದ್ದ ದೀಕ್ಷಿತ್ ಅವರು, ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿ ತಮ್ಮದೇ ಛಾಪು ಮೂಡಿಸಿದ್ದರು. ಮಂಡ್ಯದ ʼಪೌರವಾಣಿʼ ಪತ್ರಿಕೆಯಿಂದ ವೃತ್ತಿ ಬದುಕು ಆರಂಭಿಸಿದ್ದ ದೀಕ್ಷಿತ್ ಅವರು, ಉಪನ್ಯಾಸಕರಾಗಿಯೂ ಕೆಲಸ ಮಾಡಿ ತಮ್ಮದೇ ಶಿಷ್ಯಬಳಗ ಹೊಂದಿದ್ದರು.
ʼಜನವಾಹಿನಿʼ, ʼಉಷಾಕಿರಣʼ ಪತ್ರಿಕೆಗಳು ಹಾಗೂ ʼದೂರದರ್ಶನʼ, ʼಜನಶ್ರೀʼ ವಾಹಿನಿಗಳಲ್ಲಿ ಅವರು ಕೆಲಸ ಮಾಡಿದ್ದರು. ಟಿವಿಯಲ್ಲಿ ಕೆಲಸ ಮಾಡಿದರು. ಈಗ ‘ಟಿವಿ 9’ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು.
ಸದಾ ಕ್ರಿಯಾಶೀಲವಾಗಿದ್ದ ದೀಕ್ಷಿತ್ ಸಮಾಜಮುಖಿ ತುಡಿತ ಹೊಂದಿದ್ದ, ಸರಳ ನಡೆ ನುಡಿಯ ಪತ್ರಕರ್ತ. ವೃತ್ತಿ ಬಗ್ಗೆ ಅಪಾರ ಬದ್ಧತೆ. ಒಂದು ರೀತಿಯಲ್ಲಿ ಮಾಹಿತಿ ಕಣಜ ಎನ್ನುವಷ್ಟರ ಮಟ್ಟಿಗೆ ಸುದ್ದಿ ಮನೆಯಲ್ಲಿ ಪರಿಚಿತರಾಗಿದ್ದರು. ನಾಟಕ, ಸಾಹಿತ್ಯದಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ದೇಶವರು ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಸಂತಾಪ….
ಹಿರಿಯ ಪತ್ರಕರ್ತ ನಾಗರಾಜ ದೀಕ್ಷಿತ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಹುಮುಖ ಪ್ರತಿಭೆಯ ಸರಳ ಸಜ್ಜನ ಪತ್ರಕರ್ತರಾಗಿದ್ದ ದೀಕ್ಷಿತ್ ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Key words: mourning – death -journalist -Nagaraj Dikshith- DCM- Ashwath Narayan – former CM- HD kumaraswamy