ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವು ವಿಚಾರ: ಕೇರಳದ ಲಾಬಿಗೆ ಮಣಿಯಬೇಡಿ- ಸಂಸದ ಲಹರ್‌ ಸಿಂಗ್‌ ಸಿರೋಯಾ ಆಗ್ರಹ

ಬೆಂಗಳೂರು,  ಏಪ್ರಿಲ್‌, 7, 2025 (www.justkannada.in):  ವಯನಾಡ್ ಸಂಸದರಾದ ಪ್ರಿಯಾಂಕ ಗಾಂಧಿ ವಾದ್ರಾ, ಮಾಜಿ ವಯನಾಡ್ ಸಂಸದ ರಾಹುಲ್‌ ಗಾಂಧಿ ಹಾಗೂ ಕೇರಳ ಸರ್ಕಾರದ ಲಾಬಿಗೆ ಮಣಿದು ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಬಿಜೆಪಿ ಸಂಸದ ಲಹರ್‌ ಸಿಂಗ್‌ ಸಿರೋಯಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಲಹರ್ ಸಿಂಗ್, ಎಷ್ಟೇ ರಾಜಕೀಯ ಒತ್ತಡಗಳು ಬಂದರೂ ಕೂಡ ಕರ್ನಾಟಕ ಸರ್ಕಾರ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಎತ್ತಿಹಿಡಿಯಬೇಕು, ಬಂಡೀಪುರವನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆಗೆದುಹಾಕುವ ಪ್ರಯತ್ನ ಆರಂಭವಾಗಿದೆ. ನವೆಂಬರ್ 2024ರಲ್ಲಿ, ನಿರ್ಬಂಧಗಳನ್ನು ಸಡಿಲಗೊಳಿಸುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು ಆತಂಕ ಉಂಟುಮಾಡಿತ್ತು. ನಿಷೇಧವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತ್ರದಿಂದ ಈ ಬೇಡಿಕೆಗೆ ಇನ್ನಷ್ಟು ಉತ್ತೇಜನ ದೊರೆಯಿತು. ನಂತರ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅಫಿಡವಿಟ್ ಹಿಂತೆಗೆದುಕೊಂಡಿತು. ಈ ಕ್ರಮಗಳು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ನಿಷೇಧವನ್ನು ತೆಗೆದುಹಾಕಲು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ನಿವಾಸಿಗಳು, ಪರಿಸರವಾದಿಗಳು ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕುವ ರಾಜ್ಯ ಸರ್ಕಾರದ ಉದ್ದೇಶವನ್ನು ತೀವ್ರವಾಗಿ ವಿರೋಧಿಸಿ ಬೀದಿಗಿಳಿದಿದ್ದಾರೆ. ಪ್ರತಿಭಟನೆಗಳು, ಪಾದಯಾತ್ರೆಗಳು ಮತ್ತು ಅಭಿಯಾನಗಳ ಮೂಲಕ, ವನ್ಯಜೀವಿ ಸಂರಕ್ಷಣೆ ಮತ್ತು ಪ್ರದೇಶದ ಪರಿಸರ ಮಹತ್ವವನ್ನು ಒತ್ತಿ ಹೇಳುತ್ತಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.  ಇದೆಲ್ಲದರ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ರಾತ್ರಿ ಸಂಚಾರ ನಿಷೇಧವನ್ನು ಯಾವುದೇ ಕಾರಣಕ್ಕೂ ತೆಗೆದುಹಾಕಬಾರದು. ಎಲ್ಲಾ ರಾಜಕೀಯ ಒತ್ತಡಗಳನ್ನು ವಿರೋಧಿಸಬೇಕು ಮತ್ತು ಬಂಡೀಪುರವನ್ನು ಉಳಿಸಿಕೊಳ್ಳಬೇಕು ಎಂದು ಲಹರ್‌ ಸಿಂಗ್‌ ಸಿರೋಯಾ ಆಗ್ರಹಿಸಿದ್ದಾರೆ.

Key words:  Night Traffic Prohibition, Bandipur, MP, Lahar Singh Siroya