ಮೈಸೂರು,ಸೆಪ್ಟಂಬರ್,11,2020(www.justkannada.in): ಮೈಸೂರು -ಬೆಂಗಳೂರು ನಡುವೆ ನೂತನವಾಗಿ ನಿರ್ಮಾಣವಾಗುತ್ತಿರುವ ದಶಪಥ ಹೆದ್ದಾರಿಯ ಕಾಮಗಾರಿಯನ್ನ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು.
ಮೈಸೂರು ಬೆಂಗಳೂರು ನಡುವೆ ದಶಪಥ ಕಾಮಗಾರಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಕಾಮಗಾರಿಯನ್ನ ಪರಿಶೀಲಿಸಿದರು. ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ಕಾರಿಡಾರ್ ನಿರ್ಮಾಣ ನೀಲಿ ನಕ್ಷೆಯನ್ನು ಬಿಡುಗಡೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಶ್ರೀರಂಗಪಟ್ಟಣ ಬೈಪಾಸ್ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಗಳನ್ನು ವೀಕ್ಷಿಸಿದ ಸಂಸದ ಪ್ರತಾಪ್ ಸಿಂಹ, ಬಳಿಕ ಗಣಂಗೂರು ಬೇಸ್ ಕ್ಯಾಂಪ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದ ಮೊದಲ ಎಕ್ಸ್ ಪ್ರೆಸ್ ಹೈವೇ ಪ್ರಗತಿಯಲ್ಲಿದೆ. ಕೇವಲ 90 ನಿಮಿಷದಲ್ಲೇ ಮೈಸೂರಿನಿಂದ ಬೆಂಗಳೂರು ತಲುಪುವ ಗುರಿ ಇದಾಗಿದೆ. ಬರೋಬ್ಬರಿ 7400 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, ಮಂಡ್ಯ, ರಾಮನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣ ಸೇರಿ 51 ಕಿ.ಮೀ. ಉದ್ದದ 6 ಬೈಪಾಸ್, 8 ಕಿ.ಮೀ ಎಲಿವೇಟೆಡ್ ಕಾರಿಡಾರ್, ರಾಮನಗರ ಬಳಿ ವಿಶ್ರಾಂತಿ ತಾಣ, 60 ಅಂಡರ್ ಪಾಸ್, 2 ಟೋಲ್ ಗಳನ್ನು ಈ ಹೆದ್ಧಾರಿ ಒಳಗೊಂಡಿದೆ. ಈಗಾಗಲೇ ಮೊದಲ ಪ್ಯಾಕೇಜ್ ಶೇ.51.20, ಎರಡನೇ ಪ್ಯಾಕೇಜ್ ಶೇ. 30.12 ರಷ್ಟು ಕಾಮಗಾರಿ ಮುಕ್ತಾಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ಶ್ರೀಧರ್, ಭೂಸ್ವಾಧೀನ ಅಧಿಕಾರಿ ದೇವರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Key words: MP Pratap Simha – inspected –Daspath- Highway- between-Mysore – Bangalore.