ಮೈಸೂರು,ಫೆಬ್ರವರಿ,24,2021(www.justkannada.in) ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯೇ ಮುಂದುವರೆದಿದ್ದು, ಮೇಯರ್ ಚುನಾವಣೆ ಬಳಿಕ ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನಡುವೆ ಮಾತಿನ ಏಟು –ಎದುರೇಟು ನಡೆದಿದೆ.
ಪಾಲಿಕೆ ಮೇಯರ್ ಚುನಾವಣೆ ಬಳಿಕ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರು ಮೈಸೂರು ಭಾಗ ಹುಲಿ ಅಂತ ಅಬ್ಬರಿಸುತ್ತಿದ್ದರು. ಆ ಹುಲಿಯನ್ನು ಕುಮಾರಸ್ವಾಮಿ ಅವರು ಬೋನಿಗೆ ಹಾಕಿದ್ದಾರೆ. ಈಗ ಸಿದ್ದರಾಮಯ್ಯ ಬೋನಿನಲ್ಲಿರುವ ಹುಲಿ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಂತಕುಮಾರಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅವರದ್ದೇ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸದಸ್ಯ ವೋಟು ಹಾಕಿಲ್ಲ. ಕೈ ಎತ್ತದಂತೆ ಕಟ್ಟಿಹಾಕಿದವರು ಯಾರು ? ಇದು ಅವರ ಅಭ್ಯರ್ಥಿಗೆ ಅವರೇ ಅಪಮಾನ ಮಾಡಿಕೊಂಡಂತೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು.
ಇನ್ನು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು, ಸೋತಿದ್ದೇವೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ಏನು ಎಂಬುದು ಬಯಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಸಂಸದ ಪ್ರತಾಪ್ ಸಿಂಹಗೆ ಶಾಸಕ ತನ್ವೀರ್ ಸೇಠ್ ತಿರುಗೇಟು…
ಹುಲಿ ಅಂತಾ ಅಬ್ಬರಿಸುತ್ತಿದ್ದ ಸಿದ್ದರಾಮಯ್ಯನವರನ್ನ ಕುಮಾರಸ್ವಾಮಿ ಬೋನಿಗೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ಹುಲಿಯನ್ನ ಬೋನಿನಲ್ಲಿ ಹಾಕೊದು ಹಳೆಯ ಸಂಸ್ಕೃತಿ. ಮಂಗಳು ಎಲ್ಲಿರುತ್ತವೆ ಎಂಬುದನ್ನ ಅವರನ್ನೆ ಕೇಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರತಾಪ್ ಸಿಂಹರನ್ನ ಮಂಗ ಎಂದರು.
ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ಕೊನೆ ಹಂತದ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದೇವೆ. ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸಿಗುವ ಲಕ್ಷಣ ಇದ್ದ ಕಾರಣ ನಾವು ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು. ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು ಕೇಳಿಲ್ಲ ಎಂಬುದು ಬೇರೆ ಪ್ರಶ್ನೆ. ನಮಗೆ ನಮ್ಮ ಉದ್ದೇಶ ಈಡೇರಬೇಕಿತ್ತು ಅಷ್ಟೇ ಎಂದು ತನ್ವೀರ್ ಸೇಠ್ ತಿಳಿಸಿದರು.
Key words: MP Pratap simha- MLA Tanveer Saith -after –mysore-mayor election