ಮೈಸೂರು,ಜನವರಿ,29,2022(www.justkannada.in): ರಾಯಚೂರಿನಲ್ಲಿ ನ್ಯಾಯಾಧೀಶರೊಬ್ಬರು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಹೈಕೋರ್ಟ್ ಸಮಗ್ರ ತನಿಖೆ ಮಾಡಿಸುವಂತೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಗ್ರಹಿಸಿದರು.
ಮೈಸೂರಿನ ಜಯಲಕ್ಷ್ಮಿ ಪುರಂ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಈ ದೇಶ ಎಂದಿಗೂ ಒಂದಾಗಿರಲಿಲ್ಲ. ಹಾಗಾಗಿಯೇ ಈ ದೇಶದ ಮೇಲೆ ಎಲ್ಲರು ದಾಳಿ ಮಾಡಿದರು. ಆದರೆ ಸರಿಯಾಗಿ ಆಡಳಿತವನ್ನ ಕಲಿಸಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಆದರೆ ರಾಯಚೂರಿನಲ್ಲಿ ನಡೆದ ಘಟನೆ ಸರಿಯಾದುದ್ದಲ್ಲ.ಗಣರಾಜ್ಯೋತ್ಸವ ದಿನ ನಡೆದ ಘಟನೆ ಬಗ್ಗೆ ಸಾಕಷ್ಟು ಪ್ರತಿಭಟನೆ ಆಗಿದೆ. ಸ್ವತಹ ನ್ಯಾಯಾಧೀಶರು ಕೂಡ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಗಣರಾಜ್ಯೋತ್ಸವ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಜಿಲ್ಲಾ ನ್ಯಾಯಾಧೀಶರು ತಿಳಿದುಕೊಳ್ಳದಿರುವುದು ಸರಿಯಲ್ಲ.
ಇದು ನಿಜಕ್ಕು ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ?ನ್ಯಾಯಾಲಯ ಗಾಂಧಿಜೀ, ನೆಹರು, ಅಂಬೇಡ್ಕರ್ ಅವರ ಫೋಟೋ ಇಟ್ಟುಕೊಂಡಿದೆ. ಇಟ್ಟುಕೊಳ್ಳುವುದು ಬೇಡ ಎಂದಾದರೆ ಬೇಡ. ಆದರೆ ಹಾಕಿಕೊಂಡ ಬಳಿಕ ಅದನ್ನ ತೆಗೆಸುವುದು ದೊಡ್ಡ ತಪ್ಪು. ಇದು ಜಿಲ್ಲಾ ನ್ಯಾಯಾಧೀಶರಾದವರಿಗೆ ಶೋಭೆ ತರುವಂತದಲ್ಲ. ಹೈಕೋರ್ಟ್ ಈ ಬಗ್ಗೆ ಸಮಗ್ರ ತನಿಖೆ ಮಾಡಿಸಬೇಕು. ಅವರಿಗೆ ಎಚ್ಚರಿಕೆ ಜೊತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹೈಕೋರ್ಟ್ ಇದನ್ನ ಸ್ವಯಂ ಪ್ರಕರಣದ ಮೂಲಕ ವಿಚಾರಣೆ ಮಾಡಬೇಕು. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ವಿಚಾರಣೆ ಮಾಡಿಸಬೇಕು. ಅದಕ್ಕೆ ತಕ್ಕಂತೆ ವರದಿಯನ್ನ ಹೈಕೋರ್ಟ್ಗೆ ನೀಡಬೇಕು ಎಂದು ಶ್ರೀನಿವಾಸ್ ಪ್ರಸಾದ್ ಆಗ್ರಹಿಸಿದರು.
ನನಗೆ ಈ ಪ್ರಕರಣದಿಂದ ತುಂಬಾ ನೋವಾಗಿದೆ. ನನಗೆ ಅನಾರೋಗ್ಯ ಇದ್ದರು ಸಹ ನಿಮ್ಮ ಮುಂದೆ ಈ ಮಾತನ್ನ ಹಂಚಿಕೊಂಡಿದ್ದೇನೆ. ಸರ್ಕಾರ ಈ ಬಗ್ಗೆ ಮಾತಾಡಿಲ್ಲ ಅಂದರೆ ಈಗ ತೆಗೆದುಕೊಳ್ಳಲಿ. ಈ ಬಗ್ಗೆ ನಾನು ಒತ್ತಾಯ ಮಾಡುತ್ತೇನೆ. ಅದರಲ್ಲೂ ವಿಶೇಷವಾಗಿ ಕಾನೂನು ಸಚಿವರು ಮಾತಾಡಬೇಕು. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಹೈಕೋರ್ಟ್ಗೆ ಸಲ್ಲಿಸಬೇಕು. ನಾನು ಖುದ್ದಾಗಿ ಭೇಟಿಯಾಗಲು ಆಗಲ್ಲ, ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ಈ ಬಗ್ಗೆ ನಾನು ಕಾನೂನು ಸಚಿವರಿಗೆ ಪತ್ರ ಬರೆಯುತ್ತೇನೆ ಎಂದರು.
Key words: MP-Shrinivas Prasad-judge- Dr. BR Ambedkar