ಬೆಂಗಳೂರು,ಡಿಸೆಂಬರ್,18,2024 (www.justkannada.in): ಇಂದು ಚಾಮರಾಜನಗರ ಕ್ಷೇತ್ರದ ಸಂಸದರಾದ ಸುನಿಲ್ ಬೋಸ್ ಅವರು ಹೆಜ್ಜಾಲ – ಚಾಮರಾಜನಗರ ಮಾರ್ಗದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೋರಿ ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಶ್ರೀ ವಿ ಸೋಮಣ್ಣ ಅವರಿಗೆ ಇಂದು ವಿನಂತಿಯನ್ನು ಸಲ್ಲಿಸಿದರು.
ಈ ಹಿಂದೆ ಬೆಂಗಳೂರಿನಿಂದ ಸತ್ಯಮಂಗಲದ ವರೆಗೆ (ಒಟ್ಟು 260 ಕಿಮೀ) ಪ್ರಸ್ತಾಪಗೊಂಡಿದ್ದ ಈ ಮಾರ್ಗವು ಮುಂದೆ ತಮಿಳುನಾಡು ಸರ್ಕಾರವು ಸತ್ಯ ಮಂಗಲ ಪ್ರದೇಶದಲ್ಲಿ ಸರ್ವೇ ಮಾಡಲು ಅವಕಾಶ ನೀಡದ ಕಾರಣ 2013-14 ರಲ್ಲಿ ಕೆಂಗೇರಿಯಿಂದ ಚಾಮರಾಜನಗರಕ್ಕೆ ರೈಲು ಮಾರ್ಗವನ್ನು ಗುರುತಿಸಲಾಯಿತು.
ಆದರೆ ಈ ಸರ್ವೇ ಮಾರ್ಗದಲ್ಲಿ ಅರಣ್ಯ ಪ್ರದೇಶ ಬಂದ ಕಾರಣ ಇದೀಗ ಸರ್ವೇ ಮಾರ್ಗವನ್ನು ಹೆಜ್ಜಾಲದಿಂದ ಗುರುತಿಸಲಾಗಿದ್ದು ಇದು ಕನಕಪುರ – ಮಳವಳ್ಳಿ – ಯಳಂದೂರು ಮಾರ್ಗವಾಗಿ ಚಾಮರಾಜನಗರ ತಲುಪಲಿದೆ.
ಇದೊಂದು ಬಹು ನಿರೀಕ್ಷಿತ ಯೋಜನೆ ಆಗಿದ್ದು ಇದರಿಂದ ಬಹಳಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು ಮಾನ್ಯ ಸಂಸದರು ತಿಳಿಸಿದ್ದಾರೆ.