ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂಸದ ಯದುವೀರ್ ಮತ್ತು ಎಲ್.ನಾಗೇಂದ್ರ ಆಗ್ರಹ

ಮೈಸೂರು,ಜನವರಿ,18,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಶಾಸಕ ಎಲ್.ನಾಗೇಂದ್ರ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್,  ಸಿಎಂ ತವರು ಜಿಲ್ಲೆಯಲ್ಲಿ ಹಗರಣ ನಡೆದಿದೆ. ಸಿಎಂ ಸಿದ್ದರಾಮಯ್ಯ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಮೊದಲ‌ ದಿನದಿಂದಲೂ‌ ನಾವು ರಾಜೀನಾಮೆ ಕೇಳುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಕೂಡಲೇ‌ ರಾಜೀನಾಮೆ ಪಡೆದುಕೊಳ್ಳಬೇಕು. ತನಿಖೆ ಬಳಿಕವೇ ತಪ್ಪಿತಸ್ಥರಲ್ಲ‌ ಎಂದರೆ  ಅಧಿಕಾರಕ್ಕೆ ಬರಲಿ. ಸದ್ಯಕ್ಕೆ ಅವರ ವಿರುದ್ಧ ಅಗತ್ಯ  ಕ್ರಮಕೈಗೊಳ್ಳಬೇಕು ಎಂದರು.

ಮುಡಾ‌ ಹಗರಣ ಪ್ರಕರಣ ಸದ್ಯಕ್ಕೆ ಇಲ್ಲಿಗೆ ವಿಚಾರಣೆ ಮುಗಿಯುವುದಿಲ್ಲ. ಸೈಟ್ ವಾಪಸ್ ನೀಡಿದ ಬಳಿಕ ತಪ್ಪಾಗಿರುವುದನ್ನ ಸಿಎಂ ಒಪ್ಪಿಕೊಂಡಿದ್ದಾರೆ. ಬಿಜೆಪಿಯ ಹೋರಾಟ ಮತ್ತಷ್ಟು ನಿರಂತರವಾಗಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದರು.

ಬೆಂಗಳೂರು ಅರಮನೆ ಟಿಡಿಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಮೊದಲಿನಿಂದಲೂ ಅರಮನೆ ಟಾರ್ಗೆಟ್ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾದಾಗ ಆರಂಭವಾಯಿತು. ಅಂದಿನಿಂದಲೂ‌ ಇದು ಮುಂದುವರಿದುಕೊಂಡು‌ ಬಂದಿದೆ. ಈ‌ ಕುರಿತು ತಾಯಿ ಪ್ರಮೋದಾದೇವಿ ಒಡೆಯರ್ ಅವರು ಕಾನೂನು ಸಮರ ನಡೆಸುತ್ತಾರೆ. ಅರಮನೆ ಆಸ್ತಿ ರಕ್ಷಣೆ ವಿಚಾರದಲ್ಲಿ ಕ್ರಮಕೈಗೊಳ್ಳುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ-ಎಲ್. ನಾಗೇಂದ್ರ

ಮುಡಾ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಲ್.ನಾಗೇಂದ್ರ,  ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು. ನಿನ್ನೆ ಇಡಿ ಪ್ರೆಸ್ ರಿಲೀಸ್ ನಲ್ಲಿ ಅಕ್ರಮ ಎಂದು ಹೇಳಿದೆ. ಅಲ್ಲದೆ ಆಸ್ತಿಯನ್ನು ಕೂಡ ಮುಟ್ಟುಗೋಳು ಹಾಕಿಕೊಂಡಿದೆ. ಇನ್ನಾದರೂ ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಒತ್ತಾಯಿಸಿದರು.

Key words: MP, Yaduveer, L. Nagendra,  CM Siddaramaiah, resignation