ಮೈಸೂರು,ಏ10,೨೦೨೫: ಮೃತ ವ್ಯಕ್ತಿ ಹೆಸರಿನಲ್ಲಿದ್ದ ಮನೆ ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿಸಲು ವಂಚಕನ ಜತೆ ಕೈ ಜೋಡಿಸಿದ ಆರೋಪದ ಮೇಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವ್ಯವಸ್ಥಾಪಕ ಸೋಮಸುಂದ್ರು ಎಂಬಾತನನ್ನು ಅಮಾನತು ಮಾಡಲಾಗಿದೆ. ಮುಡಾ ಆಯುಕ್ತ ಎ.ಎನ್.ರಘುನಂದನ್ ಈ ಆದೇಶ ಹೊರಡಿಸಿದ್ದಾರೆ.
ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ನೀಡಿದ ದೂರಿನ ಹಿನ್ನಲೆ ಪರಿಶೀಲನೆ ನಡೆಸಿದ ಕಾರ್ಯದರ್ಶಿ ಪ್ರಸನ್ನ ಕುಮಾರ್ ನೀಡಿದ ವರದಿ ಆಧಾರದ ಮೇಲೆ ಆಯುಕ್ತರು ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಕ್ರಮ ಕೈಗೊಂಡಿದ್ದಾರೆ.

ಘಟನೆ ಹಿನ್ನೆಲೆ:
ಗೋಕುಲಂ 3 ನೇ ಹಂತ ಬಡಾವಣೆಯ ಮಾದರಿ ಮನೆ ನಂ.867 ರ 30*40 ವಿಸ್ತೀರ್ಣದ ಸ್ವತ್ತು ಲಿಲಿಯನ್ ಶಾರದಾ ಜೋಸೆಫ್ ರವರಿಗೆ 02-11-1982 ರಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾಗಿ ಕರಾರು ಪತ್ರ ನೀಡಲಾಗಿದೆ.
ಆದರೆ ಹಕ್ಕು ಪತ್ರ ವಿತರಣೆ ಆಗಿರಲಿಲ್ಲ. ಲಿಲಿಯನ್ ಶಾರದಾ ಜೋಸೆಫ್ ರವರು 03-09-1983 ರಂದು ಮೃತಪಟ್ಟರು. ಸದರಿ ಸ್ವತ್ತು 06-04-2025 ರವರೆಗೂ ಪ್ರಾಧಿಕಾರದಿಂದ ಯಾರಿಗೂ ವರ್ಗಾವಣೆ ಆಗಿರಲಿಲ್ಲ. 26-03-2024 ರಂದು ಲಿಲಿಯನ್ ಶಾರದಾ ಜೋಸೆಫ್ ರವರ ಕ್ರಮಬದ್ದ ವಾರಸುದಾರರಲ್ಲದ ವ್ಯಕ್ತಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ಗೆ ಪೌತಿ ಖಾತೆ ಮಾಡಿಕೊಟ್ಟು ಭಾರಿ ಗೋಲ್ ಮಾಲ್ ನಡೆದಿದೆ.
ಕ್ರಮಬದ್ದವಾಗಿ ವಂಶವೃಕ್ಷ ಪಡೆಯದೆ, ನಕಲಿ ದಾಖಲೆ ಸೃಷ್ಟಿಸಿ, ನಕಲಿ ವಾರಸುದಾರರಿಗೆ ಪೌತಿಖಾತೆ ಮಾಡಲಾಗಿದೆ. ಪೌತಿಖಾತೆ ಮಾಡಲು ಮನಸೋ ಇಚ್ಛೆ ಕಚೇರಿ ಟಿಪ್ಪಣಿಗಳನ್ನ ಸೃಷ್ಟಿಸಲಾಗಿದೆ. ಅಲ್ಲದೆ ಬಿಟ್ ಆಫ್ ಲ್ಯಾಂಡ್ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿದೆ.
ಅಕ್ರಮವಾಗಿ ಪಡೆದ ಮನೆಗೆ ನೆವಿಲ್ ಮಾರ್ಕಸ್ ಜೋಸೆಫ್ ರವರು ಈಗಾಗಲೇ ವಲಯ ಕಚೇರಿ 4 ರಲ್ಲಿ ಖಾತೆ ಮಾಡಿಸಿಕೊಂಡು ಮಮತ ಹಾಗೂ ಶ್ಯಾಂ ಎಂಬುವರಿಗೆ ಕೋಟ್ಯಾಂತರ ರೂಗಳಿಗೆ ಮಾರಾಟ ಮಾಡಿದ್ದಾರೆ.
ಈ ಅಕ್ರಮದ ಬಗ್ಗೆ ಆರ್.ಟಿ.ಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ , ಲೋಕಾಯುಕ್ತ ಹಾಗೂ ಮುಡಾ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ದಾಖಲೆ ಪರಿಶೀಲಿಸಿದಾಗ ವ್ಯವಸ್ಥಾಪಕ ಸೋಮಸುಂದ್ರು ಹಾಗೂ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸದರಿ ನಿವೇಶನಕ್ಕೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾಗಿದೆ.

ತಪ್ಪು ಎಸಗಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಮುಡಾ ಕಾರ್ಯದರ್ಶಿ ಪ್ರಸನ್ನಕುಮಾರ್ ಅವರು ಆಯುಕ್ತರಿಗೆ ನೀಡಿರುವ ವರದಿ ಆಧಾರದ ಮೇಲೆ ಸೋಮಸುಂದ್ರು ರವರನ್ನ ಅಮಾನತುಗೊಳಿಸಿ ಆದೇಶಿಸಲಾಗಿದೆ. ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಡಾ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಪ್ರತಿ “ ಜಸ್ಟ್ ಕನ್ನಡ” ಗೆ ಲಭ್ಯವಾಗಿದೆ.
key words: MUDA, Officer suspended, fraudsters, grab deceased’s property
MUDA Golmaal: Officer suspended for colluding with fraudsters to grab deceased’s property