ಮೈಸೂರು,ಏಪ್ರಿಲ್,29,2025 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕೆಲ ದಿನಗಳ ಹಿಂದೆ ಒಬ್ಬರನ್ನ ಅಮಾನತುಗೊಳಿಸಿದ್ದ ಆಯುಕ್ತರು ಇಂದು ಮತ್ತೊಬ್ಬ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಅನುಮತಿ ಕೋರಿ ನಗರಾಭಿವೃದ್ದಿ ಪ್ರಾಧಿಕಾರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಿಗೆ ಮುಡಾ ಆಯುಕ್ತ ರಘುನಂದನ್ ಪತ್ರ ಬರೆದಿದ್ದಾರೆ.
ಹೌದು, ಮೃತ ವ್ಯಕ್ತಿಯ ಆಸ್ತಿ ಕಬಳಿಸಲು ದಾಖಲೆ ಮಾಡಿಕೊಟ್ಟ ಆರೋಪದ ಮೇಲೆ ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲು ಮುಡಾ ಆಯುಕ್ತ ರಘುನಂದನ್ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ.
ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ನೀಡಿದ ದೂರಿನ ಹಿನ್ನಲೆ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ.
ಮೈಸೂರು ಗೋಕುಲಂ ಬಡಾವಣೆ 3 ನೇ ಹಂತ ಮಾದರಿ ಮನೆ ನಂ.867 30*40 ವಿಸ್ತೀರ್ಣದ ಮನೆ 2-11-1982 ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ರವರಿಗೆ ಮಂಜೂರಾಗಿ ಕರಾರು ಪತ್ರ ನೀಡಲಾಗಿತ್ತು. ಆದರೆ 26-03-2024 ರಲ್ಲಿ ಕ್ರಮಬದ್ದವಲ್ಲದ ವಾರಸುದಾರ ವ್ಯಕ್ತಿಗೆ ಅಂದ್ರೆ ನೆವಿಲ್ ಮಾರ್ಕಸ್ ಜೋಸೆಫ್ ಹೆಸರಿಗೆ ವಂಶ ವೃಕ್ಷ ಪಡೆಯದೇ ಪೌತಿಖಾತೆ ವರ್ಗಾವಣೆ ಮಾಡಿ ತುಂಡುಜಾಗ ಮಂಜೂರು ಮಾಡಿ ಹಕ್ಕುಪತ್ರ ನೀಡುವ ಮೂಲಕ ಅಕ್ರಮವೆಸಗಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿ.ಎನ್ ನಾಗೇಂದ್ರ ಅವರು ಮುಡಾ ಆಯುಕ್ತರಿಗೆ ದೂರು ನೀಡಿದ್ದರು.
ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿ.ಎನ್.ನಾಗೇಂದ್ರ ಮುಡಾ ಆಯುಕ್ತರಿಗೆ ದೂರು ನೀಡಿದ್ದರು.ಈ ಅಕ್ರಮ ಮಾಧ್ಯಮಗಳಲ್ಲೂ ಸಹ ವರದಿಯಾಗಿತ್ತು.ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಮುಡಾ ಕಾರ್ಯದರ್ಶಿ ದಾಖಲೆಗಳನ್ನ ಪರಿಶೀಲಿಸಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ಸಂಬಂಧ ಎಚ್ಚೆತ್ತ ಮುಡಾ ಆಯುಕ್ತರು ಕಾರ್ಯದರ್ಶಿಗಳ ವರದಿ ಆಧಾರದ ಮೇಲೆ ವ್ಯವಸ್ಥಾಪಕ ಸೋಮಸುಂದ್ರು ರವರನ್ನ ಅಮಾನತು ಪಡಿಸಿದ್ದರು.
ಇದೀಗ ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದವೂ ಶಿಸ್ತು ಕ್ರಮ ಕೈಗೊಳ್ಳಲು ಮುಡಾ ಆಯುಕ್ತ ರಘುನಂದನ್ ಅವರು ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ.
Key words: MUDA, disciplinary action, against, Special Tahsildar