ಮೈಸೂರು,ಜನವರಿ,25,2025 (www.justkannada.in): ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಮುಡಾ ಹಗರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಲೋಕಾಯುಕ್ತ ವರದಿ ಸಲ್ಲಿಸಲು ಸಿದ್ದವಾಗಿದೆ. ಈ ಮಧ್ಯೆಯೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಡಾದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.
ಮುಡಾದಿಂದ ಕ್ಯಾಥೆಡ್ರಲ್ ಸೊಸೈಟಿಗೆ 75225 ಚದರ ಅಡಿ ಜಾಗವನ್ನ ಅಕ್ರಮವಾಗಿ ನೀಡಿ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮವೆಸಗಿರುವ ಆರೋಪದ ಮೇಲೆ ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಕೀಲ ವಿ.ರವಿಕುಮಾರ್, ಸ್ನೇಹಮಯಿ ಕೃಷ್ಣ, ನಿವೃತ್ತ ಶಿಕ್ಷಕ ಶಾಂತಪ್ಪ ದೂರು ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಮುಡಾ ಮಾಜಿ ಆಯುಕ್ತ, ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದೆ.
ಈ ಕುರಿತು ಜನವರಿ 10 ರಂದೇ ಮುಡಾ ಆಯುಕ್ತ ರಘುನಂದನ್ ಅವರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ.ಲತಾ ಅವರು, ಮುಡಾದಿಂದ ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟುಗಳ ಹಂಚಿಕೆ ಸಂಬಂಧ ಮುಡಾದ ಮಾಜಿ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ 3 ದಿನದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಭೂಮಿ ನೀಡಿದ ಅಂದಿನ ಆಯುಕ್ತರು, ಅಧಿಕಾರಿಗಳು, ನಗರ ಯೋಜನಾ ಕಾರ್ಯದರ್ಶಿ, ಅವರ ಜನ್ಮದಿನಾಂಕ, ವಿಳಾಸ, ನಿವೃತ್ತರಾಗಿದ್ದರೆ ಮನೆ ವಿಳಾಸ ನೀಡಿ ಎಂದಿರುವ ಕೆ.ಲತಾ ಅವರು, ಪ್ರಾಧಿಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ನಡೆದುಕೊಂಡಿದ್ದಾರೆ. ದಿನೇಶ್ ಕುಮಾರ್ ಗಂಭೀರವಾದ ಕರ್ತವ್ಯಲೋಪ ಎಸಗಿದ್ದು, ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಜವಾಬ್ದಾರಿಯುತ ಸರ್ಕಾರಿ ನೌಕರನ ರೀತಿ ನಡೆದುಕೊಂಡಿಲ್ಲ. ಹೀಗಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1957 ರ ನಿಯಮ ಶಿಸ್ತುಕ್ರಮ ಜರುಗಿಸಲು ಅನುವಾಗುವಂತೆ ದೋಷಾರೋಪ ಸಲ್ಲಿಸಿ. ಮೂಲ ಅಥವಾ ದೃಢೀಕೃತ ಪ್ರತಿಗಳೊಂದಿಗೆ ಸರ್ಕಾರಕ್ಕೆ ಕಳುಹಿಸಿ ಎಂದು ಕೆ.ಲತಾ ಅವರು ಪತ್ರದ ಮೂಲಕ ಮುಡಾ ಆಯುಕ್ತ ರಘುನಂದನ್ ಗೆ ತಿಳಿಸಿದ್ದಾರೆ.
Key words: Illegal, site allocation, Cathedral Society, muda, action, Government