ಮೈಸೂರು,ಜೂನ್,3,2021(www.justkannada.in): ‘ಹಸಿರು ಮೈಸೂರು’ ಮಾಡಲು ಮೂಡಾ ಪಣ ತೊಟ್ಟಿದ್ದು ಜೂನ್ 5ರ ವಿಶ್ವ ಪರಿಸರ ದಿನದಂದು ವಿವಿಧ ಜಾತಿಯ 25 ಸಾವಿರ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೂಡಾ ಅಧ್ಯಕ್ಷ ರಾಜೀವ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರುನಗರ ಪಾಲಿಕೆ ,ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಹಸಿರು ಮೈಸೂರು ಮಾಡಲು ಸಜ್ಜಾಗಿದ್ದು, ಹಸಿರು ಮೈಸೂರು ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ 50 ಸಾವಿರ ಸಸ್ಯಗಳನ್ನು ಬೆಳೆಸಿದೆ. ಈ ಬಾರಿ 20 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. ಈ ಗಿಡಗಳನ್ನು ಜೂನ್ 5 ವಿಶ್ವಪರಿಸರ ದಿನಾಚರಣೆಯಂದು ಹಸ್ತಾಂತರ ಮಾಡಲಾಗುವುದು ಎಂದರು.
ಹಸಿರು ಮೈಸೂರು ಮಾಡಲು ಸಾರ್ವಜನಿಕ ಸಂಘ ಸಂಸ್ಥೆಗಳ ಸಹಭಾಗಿತ್ವ ಬೇಕು. ಹಲವು ಸಂಘ ಸಂಸ್ಥೆಗಳು ಮೇಲುಸ್ತುವಾರಿ ವಹಿಸುವುದಾಗಿ ಹೇಳಿದ್ದಾರೆ. ಯಾರೆಲ್ಲ ಆಸಕ್ತರು ಗಿಡಗಳನ್ನು ಪೋಷಿಸಲು ಇಷ್ಟವಿದೆಯೋ ಅವರು ಮೂಡಾ ಮತ್ತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸುತ್ತೂರು ಶ್ರೀಗಳು, ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಡಾ ಪ್ರಾಧಿಕಾರದ ಬಡಾವಣೆಯಲ್ಲಿ ಗಿಡ ನೆಡಲು ಗಿಡಗಳನ್ನು ಹಸಿರು ಮೈಸೂರು ವತಿಯಿಂದ ಹಸ್ತಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಒಟ್ಟಾರೆ ಮೈಸೂರು ನಗರವನ್ನು ಹಸಿರು ಮೈಸೂರು ಮಾಡಲು ಹೆಜ್ಜೆ ಇಡಲಾಗಿದೆ. ದೀರ್ಘಕಾಲ ಉಳಿಯುವ ಮತ್ತು ಹೆಚ್ಚು ಆಮ್ಲಜನಕ ನೀಡುವ ಅತ್ತಿ, ಮತ್ತಿ, ಬಾಗೆ, ಹಲಸು, ನೇರಳೆ, ಮಹಾಗನಿ, ಬೇವು, ಸಂಪಿಗೆ, ನಾಗಲಿಂಗ ಪುಷ್ಪ ಗಿಡ ನೆಟ್ಟು ಮರಗಳಾಗಿ ಬೆಳೆಸುವ ಯೋಜನೆ ರೂಪಿಸಲಾಗಿದೆ ಎಂದು ಹೆಚ್.ವಿ ರಾಜೀವ್ ತಿಳಿಸಿದರು.
Key words: Muda – green Mysore-25,000 planting -project – June 5th.