MUDA ಆಸ್ತಿ ಸಂರಕ್ಷಣೆ: ಕಾನೂನು ಸಲಹೆಗಾರರ ನೇಮಕದಲ್ಲಿ “ಮಾನದಂಡ” ವೇ ಇಲ್ಲ, ವಶೀಲಿಭಾಜಿಯೇ ಎಲ್ಲ..

MUDA Asset Protection: There is no "criteria" in the appointment of legal advisors, vashili bhaji is everything.

 

ಮೈಸೂರು, ನ.29,2024: (www.justkannada.in news) ನಿವೇಶನಗಳ ಅಕ್ರಮ ಹಂಚಿಕೆಯ ಹಗರಣದ ಸುಳಿಯಲ್ಲಿ ಈಗಾಗಲೇ ಮುಳುಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಕಾನೂನು ಸಲಹೆಗಾರರ ನೇಮಕದಲ್ಲಿ ಸಮರ್ಪಕ ಮಾನದಂಡ ಜಾರಿಗೊಳಿಸದೆ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಈ ನಷ್ಟಕ್ಕೆ ಪಕ್ಷಾತೀತವಾಗಿ ಎಲ್ಲಾ ಸರಕಾರಗಳು ಕೊಡುಗೆ ನೀಡಿವೆ.

ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಅದಕ್ಕೆ ಪೂರಕವಾಗಿ ರೈತರಿಂದ ಜಮೀನು ಸ್ವಾದೀನದಂಥ ಪ್ರಕ್ರಿಯೆಗಳು ಮುಡಾದಲ್ಲಿ ನಿತ್ಯ ನಡೆಯುತ್ತಲೇ ಇರುತ್ತದೆ. ಇದು ಕೋಟ್ಯಾಂತರ ರೂ.ಗಳ ವ್ಯವಹಾರ. ಈ ಸಲುವಾಗಿಯೇ ಕಾನೂನು ಸಮಸ್ಯೆ ಎದುರಾಗದಿರಲಿ ಎಂದು ಮುಡಾ, ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತದೆ. ಆದರೆ ವಿಪರ್ಯಾಸವೆಂದರೆ, ಈ ಕಾನೂನು ಸಲಹೆಗಾರರ ನೇಮಕವೇ ಲೋಪದಿಂದ ಕೂಡಿರುವುದು.

ಪ್ರಾಧಿಕಾರದ ಆಸ್ತಿ ಸಂರಕ್ಷನೆ ಹಾಗೂ ಆರ್ಥಿಕ ಹೊರೆಯಾಗದಂತೆ ಸೂಕ್ತ ಕಾನೂನು ಸಲಹೆ ನೀಡಲು ಕಾನೂನು ತಜ್ಞರನ್ನು ನೇಮಿಸಿಕೊಳ್ಳಲಾಗುತ್ತದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇಂಥ ಒಟ್ಟು ೩೯ ಮಂದಿ ಕಾನೂನು ತಜ್ಞರನ್ನು ನೇಮಕ ಮಾಡಿಕೊಂಡಿದ್ದುಅವರ ಖರ್ಚು, ವೆಚ್ಚ, ಸಂಬಳಕ್ಕೆಂದೇ ಲಕ್ಷಾಂತರ ರೂ. ವ್ಯಯಿಸುತ್ತಿದೆ. ಇದು “ ಮೂಗಿಗಿಂತ ಮೂಗುತಿಯೇ ಭಾರ”.. ಎಂಬಂತಾಗಿದೆ.

ವಿಪರ್ಯಾಸವೆಂದರೆ, ಬಹುತೇಕ ಕಾನೂನು ಸಮರದಲ್ಲಿ ಮುಡಾ ಎಡವುತ್ತಿದೆ. ಕೋರ್ಟ್‌ ಗಳಲ್ಲಿ ಏಪ ಪಕ್ಷೀಯ ತೀರ್ಪುಗಳು ಹೊರ ಬೀಳುತ್ತಿದೆ. ಇಂಥ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದು ಪ್ರಾಧಿಕಾರದ ಪರ ದನಿ ಎತ್ತಬೇಕಾದ ವಕೀಲರೇ ಗೈರು ಹಾಜರಾಗುತ್ತಾರೆ. ಪರಿಣಾಮ ಮುಡಾಗೆ ಕೋಟ್ಯಾಂತರ ರೂ. ನಷ್ಟ ಉಂಟಾಗುತ್ತದೆ.

ಮಾನದಂಡ ಇಲ್ಲ :

ಮುಡಾ ಕಾನೂನು ಸಲಹೆಗಾರರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾನದಂಡ ಅನುಸರಿಸುತ್ತಿಲ್ಲ. ಕಾರಣ ಮಾನದಂಡವೇ ನಿಗಧಿಯಾಗಿಲ್ಲ. ರಾಜಕೀಯ ಒತ್ತಡ, ಪ್ರಭಾವ, ಸ್ವಜಾತಿ ಪ್ರೇಮ..ಹೀಗೆ ನಾನಾ ಅಂಶಗಳ ಆಧಾರದ ಮೇಲೆ ಇಲ್ಲಿ ವಕೀಲರ ನೇಮಕವಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ಈ ಕಾರಣದಿಂದ ಬಹುತೇಕ ಸಂದರ್ಭಗಳಲ್ಲಿ ಅನುನುಭವಿಗಳೇ ಮುಡಾದಲ್ಲಿ ರಾರಾಜಿಸುತ್ತಾರೆ. ಜತೆಗೆ ಕೆಲ ಸಂದರ್ಭಗಳಲ್ಲಿ ಮುಡಾ ವಿರುದ್ಧದ ಕಕ್ಷಿಧಾರರ ಜತೆಗೆ “ ಹೊಂದಾಣಿಕೆ” ಮಾಡಿಕೊಳ್ಳುವುದರಿಂದ ನ್ಯಾಯಾಲಯದಲ್ಲಿ ಅಪೀಲ್‌ ಹಾಕುವುದಿಲ್ಲ, ಇನ್ನು ಕೆಲ ಸಂದರ್ಭಗಳಲ್ಲಿ ಸಕಾರಣಗಳೇ ಇಲ್ಲದೆ ಗೈರಾಗುವುದು ಮಾಮೂಲಿಯಾಗಿದೆ.

ಪರಾಮರ್ಶೆಯೂ ಇಲ್ಲ :

ಮುಡಾ ಆಸ್ತಿ ಸಂರಕ್ಷಣೆಗೇಂದೆ ನೇಮಕಗೊಳ್ಳುವ ಕಾನೂನು ಸಲಹೆಗಾರರ ಪರಾಮರ್ಶೆ ನಡೆಸುವ ಪ್ರವೃತ್ತಿಯೇ ಇಲ್ಲದಂತಾಗಿದೆ. ಯಾವ ಕಾರಣಕ್ಕೆ ಕೋರ್ಟ್‌ ನಲ್ಲಿ ಮುಡಾಗೆ ಹಿನ್ನಡೆಯಾಯಿತು, ಆಸ್ತಿ ಸಂರಕ್ಷಿಸಿಕೊಳ್ಳುವಲ್ಲಿ ಕಾನೂನು ತಜ್ಞರು ಎಡವಿದ್ದು ಎಲ್ಲಿ, ಯಾರಿಂದ ತಪ್ಪಾಯಿತು, ಇದಕ್ಕೆ ಯಾರು ಕಾರಣ, ಇದರ ಹೊಣೆಗಾರಿಕೆ ಯಾರದ್ದು ಎಂದು ಪರಾಮರ್ಶಿಸುವ ವ್ಯವಸ್ಥೆಯೇ ಮುಡಾದಲ್ಲಿ ಇಲ್ಲದಿರುವುದು ದುರಂತ.

ನೆಪಮಾತ್ರಕ್ಕೆ “ ಲಾ ಆಫೀಸರ್‌ “ ಇರುವರಾದರೂ ಕಾನೂನು ಸಲಹೆಗಾರರ ಅಥವಾ ತಜ್ಞರ ಕರ್ತವ್ಯ ಪರಾಮರ್ಶಿಸುತ್ತಿಲ್ಲ.

ಸ್ಥಳ ಮಹಜರು ನಡೆದಿತ್ತು:

ಈ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾನೂನು ಸಲಹೆಗಾರರೊಬ್ಬರು ಕಕ್ಷಿಧಾರರ ಜತೆ ಶಾಮೀಲಾಗಿ ಕಡತಗಳನ್ನೇ ಕಣ್ಮರೆ ಮಾಡಿದ್ದರು. ಆಗ ಮುಡಾ ಕಾರ್ಯದರ್ಶಿಯಾಗಿದ್ದ ರವಿಕುಮಾರ್‌ ಎಂಬುವವರು, ಮುಡಾ ಕಾನೂನು ಸಲಹೆಗಾರರ ಕಚೇರಿಯನ್ನೇ ಸ್ಥಳ ಮಹಜರು ಮಾಡಿ, ಮುಡಾಗೆ ಸಂಬಂಧಿಸಿದ ಕಡತಗಳನ್ನು ವಶಪಡಿಸಿಕೊಂಡಿದ್ದ ಘಟನೆ ನಡೆದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಶಾಸಕರು ಪತ್ರಿಕಾಗೋಷ್ಠಿ ನಡೆಸಿ, ಕಾನೂನು ಸಲಹೆಗಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದರು.

ಗೆದ್ದದ್ದು ವಿರಳ :

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಾನೂನು ಸಮರದಲ್ಲಿ ಕೋರ್ಟ್‌ ನಲ್ಲಿ ಗೆದ್ದ ಪ್ರಕರಣಗಳು ವಿರಳ. ಬದಲಿಗೆ ಸೋಲು ಅನುಭವಿಸಿ ದಂಡಕಟ್ಟಿದ ಪ್ರಕರಣಗಳೇ ಹೆಚ್ಚು. ಪ್ರಾಧಿಕಾರ ಸರಕಾರಿ ಸಂಸ್ಥೆಯಾದ ಕಾರಣವೋ ಏನು ಯಾರಿಗೆ ಇದನ್ನು ಉಳಿಸುವ ಉಸಾಬರಿ ಇಲ್ಲ. ಪಕ್ಷಾತೀತವಾಗಿ ಎಲ್ಲ ಸರಕಾರದ ಅವಧಿಯಲ್ಲೂ ಇದೇ “ಕಾನೂನು” ಪಾಲಿಸಲಾಗಿದೆ ಎಂಬುದು ವಿಪರ್ಯಾಸ.

key words: MUDA, Asset Protection, no criteria, legal advisors

SUMMARY:

MUDA Asset Protection: There is no “criteria” in the appointment of legal advisors, vashili bhaji is everything.