ರಾಜ್ಯಪತ್ರ ಪ್ರಕಟಿಸದೆ ಬಡಾವಣೆಗಳ ಹಸ್ತಾಂತರ ನಿಯಮಬಾಹಿರ: ಮಾಜಿ ಮೇಯರ್ ಸಂದೇಶ್ ಸ್ವಾಮಿ

ಮೈಸೂರು,ನವೆಂಬರ್,28,2024 (www.justkannada.in): ರಾಜ್ಯಪತ್ರದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರಕಟವಾಗದೆ ಬಡಾವಣೆಗಳನ್ನು  ಹಸ್ತಾಂತರ ಮಾಡುವುದು ನಿಯಮ ಬಾಹಿರ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಂದೇಶ್ ಸ್ವಾಮಿ, ಮುಡಾ ಮತ್ತು ಖಾಸಗಿಯವರು ನಿರ್ಮಿಸಿರುವ ಸುಮಾರು 900 ಬಡಾವಣೆಗಳಿದ್ದು, ಇದರಲ್ಲಿ ಮೊದಲನೇ ಹಂತವಾಗಿ 240 ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲು ಮುಂದಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮ ಸರಿಯಲ್ಲ.  ಈಗಾಗಲೇ ನಿಯಮ ಮೀರಿ ಹಸ್ತಾಂತರವಾಗಿರುವ ಹಲವು ಬಡಾವಣೆಗಳಲ್ಲಿ ಉದಾಹರಣೆಗೆ ವಿಜಯನಗರದ ಮೂರನೇ ಹಂತ ಬಡಾವಣೆಯಲ್ಲಿ ಖಾತೆ ಮಾಡಲು, ಕಂದಾಯ ನಿಗದಿ ಮಾಡಲು ಹಾಗೂ ನಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಕೇವಲ ಪಾಲಿಕೆ ನಿರ್ವಹಣೆ ಮಾಡಬಹುದೆ ಹೊರತು  ಅಭಿವೃದ್ಧಿ ಮಾಡಲು ನಿಯಮಾನುಸಾರ ಅವಕಾಶವಿಲ್ಲ ಎಂದಿದ್ದಾರೆ.

ಕರ್ನಾಟಕ ನಗರಾಭಿವೃದ್ಧಿ ಕಾಯ್ದೆಯ ಪ್ರಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತಾನು ಅಭಿವೃದ್ಧಿಪಡಿಸಿದ ಅಥವಾ ಖಾಸಗಿಯವರು ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ನೂರಕ್ಕೆ ನೂರರಷ್ಟು ಮೂಲ ಸೌಕರ್ಯ ಕಲ್ಪಿಸಿದ ನಂತರವಷ್ಟೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು.  ಈಗಾಗಲೇ  ಮುಡಾ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿರುವ ಅನೇಕ ಬಡಾವಣೆಗಳಲ್ಲಿ ಉತ್ತಮ ರಸ್ತೆಗಳಿಲ್ಲ. ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆಯಿಲ್ಲ. ಸಂಪರ್ಕ ಕಲ್ಪಿಸುವ ಮಾರ್ಗಗಳಿಲ್ಲ.  ಕುಡಿಯಲು ಕಾವೇರಿ ನೀರಿಲ್ಲ.  ಮೈಸೂರಿನಲ್ಲಿ ನೂತನ ಬಡಾವಣೆಗಳು   ನಿರ್ಮಾಣವಾಗುತ್ತಿರುವಂತೆ ಅಗತ್ಯ ಮೂಲಭೂತ ಸವಲತ್ತು ಕಲ್ಪಿಸುವಲ್ಲಿಯೂ ಅಧಿಕಾರಿಗಳು ಆಸಕ್ತಿ ವಹಿಸಬೇಕು  ಎಂದು ಒತ್ತಾಯಿಸಿದ್ದಾರೆ.

ಮೈಸೂರು ನಗರದೊಳಗೆ ಸುಮಾರು 2.20.000  ಆಸ್ತಿಗಳಿವೆ. ಇದರಲ್ಲಿ ಸುಮಾರು 25 ರಿಂದ 30 ಸಾವಿರ ಖಾಲಿ ನಿವೇಶನಗಳಿವೆ. ನಗರದ ಹೊರಗೆ ಮುಡಾ ಮತ್ತು ಮುಡಾ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿ ಸುಮಾರು 2ರಿಂದ 3 ಲಕ್ಷ ನಿವೇಶನಗಳಿವೆ. ಇದರಲ್ಲಿ  ಸುಮಾರು 2 ಲಕ್ಷ  ಖಾಸಗಿ ನಿವೇಶನಗಳಿಗೆ ಅನುಮತಿ ನೀಡಲಾಗಿದ್ದು, ಇದರಲ್ಲಿ ಸುಮಾರು 1.5 ಲಕ್ಷ ನಿವೇಶನಗಳು ಖಾಲಿ ಬಿದ್ದಿವೆ. ಇನ್ನು ಹತ್ತಾರು ವರ್ಷಗಳಾದರೂ ಇಂತಹ ಬಡಾವಣೆಗಳು ಅಭಿವೃದ್ಧಿ ಕಾಣುವುದು ಅಸಾಧ್ಯ. ಕಾರಣ    ಹಣವಂತರು ಹೂಡಿಕೆಯ ಲಾಭ ಪಡೆಯಲು ನಿವೇಶನಗಳನ್ನು ಕೊಂಡು ಮನೆ ನಿರ್ಮಿಸದೆ ಹಾಗೆ ಹತ್ತಾರು ವರ್ಷಗಳಿಂದ ಖಾಲಿ ಬಿಟ್ಟಿದ್ದಾರೆ. ಒಂದೆಡೆ ಮುಡಾಗೆ 20- 30 ವರ್ಷಗಳಿಂದ ನಿವೇಶನಕ್ಕಾಗಿ ಸುಮಾರು 92 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಇದನ್ನೆಲ್ಲಾ ಮುಡಾ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಬಡಾವಣೆಗಳಿಗೆ ನೀರಿನ ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಮಾಡುವ ಸಲುವಾಗಿ  ಅಭಿವೃದ್ಧಿದಾರರಿಂದ 300 ಕೋಟಿ ರೂ. ಗೂ ಅಧಿಕ  ಶುಲ್ಕ ವಸೂಲಿ ಮಾಡಿದ್ದು,  ಸಮರ್ಪಕವಾಗಿ ಸೂಕ್ತ ವ್ಯವಸ್ಥೆ  ಕಲ್ಪಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದೀಗ ಮೈಸೂರು ಪಾಲಿಕೆಗೆ ಬಡಾವಣೆಗಳನ್ನು ತಕ್ಷಣ ಹಸ್ತಾಂತರಿಸಿದರೆ, ಪಾಲಿಕೆ ಯಾವುದೇ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಪಾಲಿಕೆ 200-300 ಕೋಟಿ ರೂ. ತೆರಿಗೆ ಸಂಗ್ರಹಿಸಿದರೂ ನಿರ್ವಹಣೆ ವೆಚ್ಚ ಸರಿದೂಗಿಸಲಾಗದೆ   200-300  ಕೋಟಿ ರೂ. ಕಾಮಗಾರಿಗಳ ಬಾಕಿ ಉಳಿಸಿಕೊಂಡಿದೆ. ಇನ್ನು  ಪಂಚಾಯಿತಿಗಳಲ್ಲೂ ಬಡಾವಣೆಗಳ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆಯಿಲ್ಲ ಮತ್ತು ಸರ್ಕಾರ ಆರ್ಥಿಕ ನೆರವು ಒದಗಿಸುವ ಸ್ಥಿತಿಯಲ್ಲೂ ಇಲ್ಲ. ಹೀಗಿರುವಾಗ ಮುಡಾ ಏಕಾಏಕಿ ಬಡಾವಣೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸದೆ ಹಸ್ತಾಂತರಿಸಿದರೆ, ನಿವೇಶನ ಪಡೆದಿರುವ ಬಡವರು ಮತ್ತು ಮಧ್ಯಮ ವರ್ಗದ ಜನರು ಮನೆಕಟ್ಟಿ ವಾಸಿಸಲಾಗದೆ ಅತಂತ್ರ ಸ್ಥಿತಿಗೆ ಸಿಲುಕಲಿದ್ದು, ಸರ್ಕಾರ ಈ ಬಗ್ಗೆ ಚಿಂತಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆಗಳನ್ನು  ತರಾತುರಿಯಲ್ಲಿ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸುವ ಪರಿ ನೋಡಿದರೆ ಮುಡಾ ಹಗರಣ ದಿಕ್ಕು ತಪ್ಪಿಸಲೆಂದೋ ಅಥವಾ ಯಾರದೊ ಹಿತಾಸಕ್ತಿಗೋ ಇರಬೇಕು ಎಂಬುವ ಅನುಮಾನ ಸಾರ್ವಜನಿಕವಾಗಿ ಚರ್ಚಿತವಾಗುತ್ತಿದೆ.  ಆದ್ದರಿಂದ ಜಿಲ್ಲಾಧಿಕಾರಿಗಳೂ ಆಗಿರುವ ಮುಡಾ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಚರ್ಚಿಸಿ, ಸಮಗ್ರ ಅಭಿವೃದ್ಧಿ ಪಡಿಸಿದ ನಂತರವೇ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗೆ ವಹಿಸಬೇಕು ಎಂದು ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.

Key words: MUDA, Site,Former Mayor,  Sandesh Swamy