ಮೈಸೂರು,ಸೆಪ್ಟಂಬರ್,9,2024 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರದ ಬಯಲಾಗುತ್ತಿದ್ದು, ಮುಡಾ ಮಾಜಿ ಆಯುಕ್ತರ ಬಳಿಕ ಇದೀಗ ಮುಡಾ ಮಾಜಿ ಅಧ್ಯಕ್ಷರ ಸರದಿ ಶುರುವಾಗಿದೆ.
ಸಿಎಂ ಸಿದ್ದರಾಮಯ್ಯ ಕಾನೂನು ಬಾಹಿರವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ವಿಚಾರ ಇದೀಗ ಕೋರ್ಟ್ ಅಂಗಳದಲ್ಲಿದೆ. ಹೀಗಿರುವಾಗಲೇ ಮುಡಾ ಮಾಜಿ ಅಧ್ಯಕ್ಷನೇ ಕಾನೂನು ಬಾಹಿರವಾಗಿ ಒಂದೇ ದಿನ ಬರೋಬ್ಬರಿ 848 ನಿವೇಶನಗಳನ್ನ ಖಾತೆ ಮಾಡಿಸಿಕೊಂಡಿರೋ ಆರೋಪ ಕೇಳಿಬಂದಿದೆ.
ಹೌದು ಈ ಆರೋಪ ಕೇಳಿ ಬಂದಿರುವುದು ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಮೇಲೆ. ಆಯುಕ್ತರ ಸರದಿ ಬಳಿಕ ಇದೀಗ ಮುಡಾ ಮಾಜಿ ಅಧ್ಯಕ್ಷನೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದೆ. ಒಂದೇ ದಿನದಲ್ಲಿ ಬರೋಬ್ಬರಿ 848 ನಿವೇಶನಗಳ ಖಾತೆ ಮಾಡಿಸಿಕೊಂಡ ಆರೋಪ ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಅವರ ಮೇಲೆ ಕೇಳಿ ಬಂದಿದೆ.
ಈ ಬಗ್ಗೆ 22-2-2022 ರಂದೇ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಮುಡಾ ಆಯುಕ್ತ ಡಿ.ಬಿ. ನಟೇಶ್ ಪತ್ರ ಬರೆದಿದ್ದು ಇದೀಗ ಬೆಳಕಿಗೆ ಬಂದಿದೆ. ಮೈಸೂರು ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಹೆಚ್.ವಿ.ರಾಜೀವ್ ಅವರೇ ಅಧ್ಯಕ್ಷರಾಗಿದ್ದು, ಮೈಸೂರು ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡವಾಣೆ ನಿರ್ಮಾಣ ಮಾಡಲಾಗಿತ್ತು. ಬಡಾವಣೆ ಕೂಡ ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮುಡಾ ಅಧ್ಯಕ್ಷರಾಗಿದ್ದ ಎಚ್.ವಿ ರಾಜೀವ್ ಅವರೇ ಅಧ್ಯಕ್ಷರಾಗಿದ್ದರು. 252 ಎಕರೆ ಜಾಗದ ಕೆಲವು ಸರ್ವೆ ನಂಬರ್ ಗಳ ವ್ಯಾಜ್ಯ ನ್ಯಾಯಾಲಯದಲ್ಲಿದ್ದರೂ ಕೂಡ ಸದರಿ ಬಡವಾಣೆಗಳ ನಿವೇಶನ ಹಕ್ಕುಗಳನ್ನ ವರ್ಗಾವಣೆ ಮಾಡಬಾರದೆಂದು ಆದೇಶವಿದೆ.
ಹೀಗಿದ್ದರೂ ಕೂಡ 848 ನಿವೇಶನಗಳನ್ನ ಒಂದೇ ದಿನದಲ್ಲಿ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿರುವ ಆರೋಪ ಎಚ್.ವಿ ರಾಜೀವ್ ಅವರ ಮೇಲೆ ಕೇಳಿ ಬಂದಿದೆ. ಅದಷ್ಟೇ ಅಲ್ಲದೆ ಆಯುಕ್ತರ ಅನುಮೊದನೆ ಇಲ್ಲದಿದ್ದರು ನಿವೇಶನಗಳನ್ನ ರಾಜೀವ್ ಬಿಡುಗಡೆ ಗೊಳಿಸಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ 16-02-2022 ಹಾಗೂ 22-02-2022 ರಂದು ಎರಡೆರಡು ಬಾರಿ ಅಂದಿನ ಮುಡಾ ಆಯುಕ್ತ ನಟೇಶ್ ಪತ್ರ ಬರೆದರೂ ಕೂಡ ತಮ್ಮ ಕೊಠಡಿಯಲ್ಲಿಯೇ ಕಡತಗಳನ್ನು ಇಟ್ಟುಕೊಂಡಿದ್ದರು ಅನ್ನೋದು ಬೆಳಕಿಗೆ ಬಂದಿದೆ. ಆಯುಕ್ತ ಡಿ.ಬಿ.ನಟೇಶ್ ಮಾಹಿತಿ ಹಕ್ಕಿನ ಅಡಿಯಲ್ಲಿ ಹಲವರು ಅರ್ಜಿ ಸಲ್ಲಿಸಿದ್ದಾರೆ ಹೀಗಾಗಿ ಕಡತಗಳನ್ನು ಕೊಡಿ ಎಂದು ಕೇಳಿಕೊಂಡರೂ ಕಡತ ನೀಡಿಲ್ಲ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಡಾ ಮಾಜಿ ಅಧ್ಯಕ್ಷ 848 ನಿವೇಶನ ಪಡೆದ ವಿಚಾರ ನನಗೆ ಗೊತ್ತಿಲ್ಲ, ರಾಜೀವ ನಿವೇಶನ ತಗೊಂಡಿದ್ದಾರಾ ಅದು ಗೊತ್ತಿಲ್ಲ, ಪಿ.ಎನ್ ದೇಸಾಯಿ ತನಿಖೆ ನಡೆಸುತ್ತಿದ್ದಾರೆ ಹೀಗಾಗಿ ಮುಡಾದ ಯಾವ ವಿಚಾರದಲ್ಲಿ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಅವರ 14 ನಿವೇಶನ ಕೇಸ್ ಕೋರ್ಟ್ ಅಂಗಳದಲ್ಲಿ ಇರೋವಾಗಲೇ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಮೇಲೆ ಕೇಳಿ ಬಂದಿರೋ ಆರೋಪಕ್ಕೆ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರಬರಬೇಕಿದೆ.
Key words: muda scam, Account, 848 sites, single day, former president