ಮೈಸೂರು,ಜುಲೈ,29,2024 (www.justkannada.in): ಮುಡಾ ಹಗರಣ ವಿಚಾರ ಸಂಬಂಧ ಬಿಜೆಪಿ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದೆ. ಇಲ್ಲದ ಹಗರಣವನ್ನ ಬಿಜೆಪಿ ಸೃಷ್ಟಿ ಮಾಡುತ್ತಿದೆ. ಕರ್ನಾಟಕಕ್ಕೆ ಭ್ರಷ್ಟಾಚಾರದ ಪಟ್ಟಿ ಕಟ್ಟುವ ಯತ್ನ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿವರಿಗೆ ಯಾವ ಐಡಿಯಾಲಾಜಿ ಇಲ್ಲ. ಬಿಜೆಪಿ ಯಾವತ್ತು ನ್ಯಾಯ ಪರವಾಗಿಲ್ಲ. ಈಗಾಗಲೇ ಮುಡಾ ಹಗರಣವನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ. ನ್ಯಾಯಾಂಗ ತನಿಖೆಯನ್ನ ಕೇಂದ್ರ ಸಚಿವರು ಅನುಮಾನದಿಂದ ನೋಡಿದರೇ ಅದರಲ್ಲಿ ಅರ್ಥ ಇದೆಯಾ..? ಇವರ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಗೊತ್ತಾ. ಒಂದು ಪ್ರಕರಣವನ್ನಾದರೂ ನ್ಯಾಯಾಂಗ ತನಿಖೆ ಮಾಡಿಸಿದ್ದಾರಾ. ಕೋವಿಡ್ ಸಮಯದಲ್ಲಿ ನಾಲ್ಕು ಸಾವಿರ ಕೋಟಿ ನುಂಗಿದರು. ಅದನ್ನ ತನಿಖೆ ಮಾಡಿದ್ರಾ? ನಾನು ಬಂದ ಮೇಲೆ ಏಳೆಂಟು ಹಗರಣ ಸಿಬಿಐಗೆ ಕೊಟ್ಟಿದ್ದೇನೆ. ಇವರ ಅವಧಿಯಲ್ಲಿ ಒಂದಾದ್ರು ಸಿಬಿಐಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಸಿಬಿಐನ್ನ ಚೋರ್ ಬಜಾವ್ ಸಂಸ್ಥೆ ಎನ್ನುತ್ತಿದ್ದ ಬಿಜೆಪಿ ಈಗ ಸಿಬಿಐ ಸಿಬಿಐ ಎಂದು ಬಾಯಿ ಬಡಿಯುತ್ತಿದೆ. ಮುಡಾ ಹಗರಣ ಅರೊಪದ ವಿಚಾರದಲ್ಲಿ ನನಗೆ ಯಾವ ಬೇಸರವೂ ಆಗಿಲ್ಲ. ತಪ್ಪೇ ಮಾಡಿಲ್ಲ ಎನ್ನುವುದಾದರೇ ಬೇಸರ ಏಕೆ ಆಗುತ್ತದೆ. 40 ವರ್ಷದ ರಾಜಕಾರಣದಲ್ಲಿ ನನ್ನ ಮೇಲೆ ಇಂತಹ ಆರೋಪ ಪ್ರಕರಣ ಬಹಳ ನಡೆದವು. ಇದನ್ನ ರಾಜಕೀಯವಾಗಿ ಎದುರಿಸುತ್ತೇನೆ. ಬಿಜೆಪಿ ಯಾಕೆ ಪಾದಯಾತ್ರೆ ಮಾಡುತ್ತಿದೆ. ಪಾದಯಾತ್ರೆ ಮಾಡುವುದಾರೇ ಮಾಡಲಿ. ಅದನ್ನ ರಾಜಕೀಯವಾಗಿ ಎದುರಿಸಲು ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.
ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟ್ ಬರೆಸಿಕೊಂಡಿದ್ದಾರೇ ಪಟ್ಟಿ ಕೊಡ್ಲಾ..?
ಮುಡಾದಿಂದ ಯಾವುದೇ ಸೈಟ್ ಪಡೆದಿಲ್ಲ ಎಂದು ನಿನ್ನೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರಿಗೆ ಎಷ್ಟು ಸೈಟ್ ಹೋಗಿದೆ ಗೊತ್ತಿದ್ಯಾ? ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟ್ ಬರೆಸಿಕೊಂಡಿದ್ದಾರೇ ಪಟ್ಟಿ ಕೊಡ್ಲಾ. ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೇ ಹೇಗೆ? ನಾನು ಸ್ವಾಧೀನ ಪತ್ರ ಪಡೆದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಸುಳ್ಳು. ಇವರೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.
ಉದ್ದೇಶ ಪೂರ್ವಕವಾಗಿ ನೀತಿ ಆಯೋಗದ ಸಭೆಗೆ ಬಾಯ್ಕಾಟ್ ಮಾಡಿದ್ದೆ.
ಇನ್ನು ನೀತಿ ಆಯೋಗದ ಸಭೆಗೆ ಗೈರಾದ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಉದ್ದೇಶ ಪೂರ್ವಕವಾಗಿ ನೀತಿ ಆಯೋಗದ ಸಭೆಗೆ ಬಾಯ್ಕಾಟ್ ಮಾಡಿದ್ದೇನೆ. ನಾನು ಮಾತ್ರ ಅಲ್ಲ, ಬಿಜೆಪಿಯೇತರ ಸರ್ಕಾರದ ರಾಜ್ಯಗಳು ಬಾಯ್ಕಾಟ್ ಮಾಡಿದ್ದಾರೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಸಭೆಗೆ ಹೋಗಿ ಏನು ಪ್ರಯೋಜನ ಹೇಳಿ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ.ಪ್ರತಿ ಭಾರಿ ನಿರ್ಮಾಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕರ್ನಾಟಕದ ಖುಣ ತೀರಿಸಬಾರದಾ? ಕುಮಾರಸ್ವಾಮಿ ಮಂಡ್ಯದಿಂದ ಆಯ್ಕೆಯಾಗಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಕಾರ್ಖಾನೆ ತಂದಿದ್ದಾರಾ. 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯ ದೇಶದ ಯಾವ ರಾಜ್ಯಕ್ಕೂ ಆಗಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ ಎರಡನೇ ರಾಜ್ಯ ಕರ್ನಾಟಕ ಇಂತಹ ರಾಜ್ಯಕ್ಕೆ ಅನ್ಯಾಯಾಗುತ್ತಿದೆ. ಅನ್ಯಾಯ ಆಗಿಲ್ಲ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ಆಂಧ್ರ ಬಿಹಾರಕ್ಕೆ ಕೊಟ್ಟಿರುವುದು ಎಷ್ಟು. ನಮ್ಮದು ಎಷ್ಟು ಎಂದು ಹೇಳಲಿ. ಭದ್ರಾ ಯೋಜನೆ ಸೇರಿದಂತೆ ಹಳೆಯ ಯಾವ ಯೋಜನೆಗಳಿಗೆ ದುಡ್ಡು ಕೊಟ್ಟಿಲ್ಲ. ನಮಗೆ ಪಾಠ ಮಾಡಲು ಬರುತ್ತಾರಾ ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ.
ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ. ಆದರೆ ಕಡಿಮೆಯಾಗಿದೆ ಎಂದು ಹೇಳಬಲ್ಲೇ. ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಎಷ್ಟಿತ್ತು. ಅದನ್ನು ಇಡೀ ದೇಶವೇ ನೋಡಿದೆ. ಈಗ ಕರ್ನಾಟಕವನ್ನ ಭ್ರಷ್ಟ ರಾಜ್ಯ ಎಂದು ಬಿಂಬಿಸುವ ಯತ್ನವನ್ನ ಬಿಜೆಪಿ ಮಾಡುತ್ತಿದೆ. ಸಂಸತ್ ನಲ್ಲಿ ಕರ್ನಾಟಕಕ್ಕೆ ಭ್ರಷ್ಟಚಾರದ ಹಣೆ ಪಟ್ಟಿ ಕಟ್ಟುವ ಯತ್ನ ನಡೆಯುತ್ತಿದೆ. ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ..? ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
ಕೇಂದ್ರದವರು ಮಧ್ಯಸ್ಥಿಕೆ ವಹಿಸಲಿ: ನಾವು ಮೇಕೆದಾಟು ಡ್ಯಾಂ ಕಟ್ಟಲು ಸಿದ್ದರಿದ್ದೇವೆ.
ಮೇಕೆದಾಟು ಯೋಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಸಿದ್ದರಿದ್ದೇವೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಕೇಂದ್ರದವರು ಮಧ್ಯಸ್ಥಿಕೆ ವಹಿಸಲಿ. ನಾವು ಡ್ಯಾಂ ಕಟ್ಟಲು ಸಿದ್ದರಿದ್ದೇವೆ ಎಂದು ಹೇಳಿದರು.
ರಾಜ್ಯದಿಂದ ಕೈಗಾರಿಕೆಗಳು ವಾಪಸ್ ಹೋಗುತ್ತಿದೆ ಎಂಬ ನಿರ್ಮಾಲಾ ಸೀತಾರಾಮನ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಿಂದ ಅಲ್ಲ ದೇಶದಿಂದಲೇ ಕೈಗಾರಿಕೆಗಳು ವಾಪಸ್ ಹೋಗುತ್ತಿವೆ. ನಮ್ಮಲ್ಲಿ ಕೈಗಾರಿಕೆಗಳು ಎಷ್ಟು ಬೆಳವಣಿಗೆಯಾಗಿದೆ ಎಂಬುದನ್ನ ವಿವರವಾಗಿ ಹೇಳುತ್ತೇನೆ. ಎಂ.ಬಿ ಪಾಟೀಲ್ ಹಾಗೂ ಪ್ರಿಯಾಂಖ್ ಖರ್ಗೆಗೆ ಪಟ್ಟಿ ಕೊಡುವಂತೆ ಹೇಳುತ್ತೇನೆ ಎಂದರು.
ನಾನು ಹಾಗೂ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದೇವೆ. ಪಕ್ಷ ಹಾಗೂ ಸರ್ಕಾರದ ವಿಚಾರವಾಗಿ ಚರ್ಚೆ ನಡೆಸುತ್ತೇವೆ ಎಂಧು ದೆಹಲಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
Key words: muda scam, Blackmail, BJP, CM Siddaramaiah