ಮುಡಾ ಹಗರಣ ಸಣ್ಣ ಪ್ರಕರಣ: ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ಹೈಕಮಾಂಡ್ ಇದೆ- ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು,ಸೆಪ್ಟಂಬರ್,27,2024 (www.justkannada.in): ಮುಡಾ ಹಗರಣ ಸಣ್ಣ ಪ್ರಕರಣವಾಗಿದೆ. ಆದರೆ ಈ ಬಗ್ಗೆ ಪ್ರತಿನಿತ್ಯ ಚರ್ಚಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ಹೈಕಮಾಂಡ್ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರು ನಮ್ಮ ಸರ್ಕಾರವನ್ನ ಟಾರ್ಗೆಟ್ ಮಾಡಿದ್ದಾರೆ. ಈ ಹಿಂದೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಸಿಎಂ ಆಗಿದ್ದಾಗ ಗೋದ್ರಾ ಹತ್ಯಾಕಾಂಡ ನಡೆದಿತ್ತು. ಆಗ ಅವರು ರಾಜೀನಾಮೆ ನೀಡಿದ್ದರಾ ? ಅಮಿತ್ ಶಾ ವಿರುದ್ಧವೂ ಹಲವು ಪ್ರಕರಣಗಳು ಬಾಕಿ ಇದ್ದವು. ಅವರೂ ಕೂಡ ರಾಜೀನಾಮೆ ನೀಡಿರಲಿಲ್ಲ. ಬಿಜೆಪಿಯವರು ಯಾವುದೋ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.

ನಾವು ಸಿಎಂ ಸಿದ್ದರಾಮಯ್ಯಗೆ ಬೆಂಬಲ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ. ಸಿಬಿಐ ಅವಕಾಶವನ್ನು ಹಿಂಪಡೆಯುವುದು ಸರ್ಕಾರಕ್ಕೆ ಇರುವ ಅಧಿಕಾರ. ನಾನು ಗೃಹ ಮಂತ್ರಿ ಇದ್ದಾಗ ವೀರಪ್ಪನ್ ಕೇಸ್ ರೆಫರ್ ಮಾಡಿದ್ದೆ. ದೇವರಾಜು ಅರಸು ಇದ್ದಾಗಲೂ ಸಿಬಿಐ ಅವಕಾಶವನ್ನು ಹಿಂಪಡೆಯಲಾಗಿತ್ತು. ಸರ್ಕಾರ ಈ ಒಂದು ನಿರ್ಧಾರ ತೆಗೆದುಕೊಂಡಿರುವುದು ಸಾಮಾನ್ಯ. ಸಿಬಿಐ ತನಿಖೆಯ ಅಧಿಕಾರ ಹಿಂಪಡೆಯುವುದು ಸರ್ಕಾರಕ್ಕೆ ಇರುವ ಅಧಿಕಾರವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Key words: Muda scam, High command, CM Siddaramaiah, Mallikarjuna Kharge