ಮುಡಾ ಹಗರಣ: ಹಂಚಿಕೆಯಾದ ಸೈಟ್ ಗಳು ಮತ್ತೊಬ್ಬರಿಗೆ ಮಾರಾಟ ಮಾಡದಂತೆ ತಡೆಯಾಜ್ಞೆಗೆ ಕೋರ್ಟ್ ಮೊರೆ.

ಮೈಸೂರು,ಅಕ್ಟೋಬರ್,2,2024 (www.justkannada.in): ಮುಡಾ  ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಂಚಿಕೆಯಾಗಿರುವ ಸೈಟ್ ಗಳನ್ನ ಮತ್ತೊಬ್ಬರಿಗೆ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿ ನ್ಯಾಯಾಲಯದ ಮೊರೆ ಹೋಗಲಾಗಿದೆ.

ಮೂಡಾ ಬಿಡಿ ನಿವೇಶನ, ಪ್ರೋತ್ಸಾಹ ನಿವೇಶನ ಹಾಗೂ ಆಯುಕ್ತ ದಿನೇಶ್ ಕುಮಾರ್ ಸಮಯದಲ್ಲಿ ನೀಡಿರುವ ಸೈಟ್ ಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದಕ್ಕೆ  ತಡೆ ನೀಡುವಂತೆ ಮೈಸೂರಿನ ಪ್ರಧಾನ ಸಿವಿಲ್  ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮನವಿ ಮಾಡಲಾಗಿದ್ದು ಪ್ರಕರಣ ದಾಖಲಾಗಿದೆ.

ಈ ಸಂಬಂಧ ವಕೀಲ ಎಸ್.ಅರುಣ್ ಕುಮಾರ್ ಅವರು  ನ್ಯಾಯಾಲಯದಲ್ಲಿ ಸಿವಿಲ್ ದಾವೆ ದಾಖಲು ಮಾಡಿದ್ದು,  ತನಿಖೆ ಹಿನ್ನೆಲೆ ಹಂಚಿಕೆಯಾಗಿರುವ ಸೈಟ್ ಗಳು ಮತ್ತೊಬ್ಬರಿಗೆ ಮಾರಾಟ ಮಾಡದಂತೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ. ಮುಗ್ದರಿಗೆ ಅನ್ಯಾಯ ಆಗದಂತೆ ತಡೆಗಟ್ಟಲು ನ್ಯಾಯಾಲಯದ ಮೆಟ್ಟಿಲೇರಲಾಗಿದೆ.

ಈ ಕುರಿತು ಮಾತನಾಡಿರುವ ವಕೀಲ ಅರುಣ್ ಕುಮಾರ್,  ಮುಡಾ 50:50 ಹಗರಣದ ಬಗ್ಗೆ ನ್ಯಾ.ದೇಸಾಯಿ ಆಯೋಗ, ಲೋಕಾಯುಕ್ತ, ಇ.ಡಿ. ಹಂತದಲ್ಲಿ ತನಿಖೆ ನಡೆಯುತ್ತಿವೆ. ಅವೆಲ್ಲವೂ ಕ್ರಿಮಿನಲ್ ಪ್ರಕರಣಗಳು. ತನಿಖೆಗಳು ಮುಗಿಯಲು ಎಷ್ಟು ವರ್ಷ ಬೇಕೋ ಗೊತ್ತಿಲ್ಲ. ಈ ಹಂತದಲ್ಲಿ 50:50 ಅನುಪಾತದಲ್ಲಿ ಸೈಟ್ ಪಡೆದ ಫಲಾನುಭವಿಗಳು ಅಮಾಯಕರಿಗೆ ಟೋಪಿ ಹಾಕುವ ಸಾಧ್ಯತೆ ಇದೆ. ಖಾತೆ ವರ್ಗಾವಣೆ ಮಾಡುವುದನ್ನು ತಡೆಯದೇ ಇದ್ದರೆ ಸೈಟ್‌ ಗಳು ಕೈ ಬದಲಾಗಬಹುದು. ಇದರಿಂದ ಅಕ್ರಮದ ಬಗ್ಗೆ ಮಾಹಿತಿ ಇಲ್ಲದ ಮುಗ್ಧರು ತೊಂದರೆ ಸಿಲುಕಬಹುದು‌. ಇದನ್ನು ತಪ್ಪಿಸಲು 50:50 ಅನುಪಾತದ ಯಾವುದೇ ಸೈಟ್ ಪರಭಾರೆ ಮಾಡದಂತೆ ತಡೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Key words: Muda scam, mysore court, stay, against sale, sites