ಮೈಸೂರು,ಸೆಪ್ಟಂಬರ್,2,2024 (www.justkannada.in): ಸ್ನೇಹಮಹಿ ಕೃಷ್ಣ ಬ್ಲಾಕ್ ಮೇಲರ್. ನ್ಯಾಯಾಲಯಕ್ಕೆ ಸ್ನೇಹಮಯಿ ಕೃಷ್ಣ ನೀಡಿರುವ ಎಲ್ಲಾ ದಾಖಲೆಗಳು ಫೇಕ್ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಸ್ನೇಹಮಯಿ ಕೃಷ್ಣ ದೂರು ನೀಡಿದ್ದು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ವಿರುದ್ಧ 22 ಪ್ರಕರಣಗಳಿವೆ. ನಗರ ವ್ಯಾಪ್ತಿಯಲ್ಲಿ 17, ಜಿಲ್ಲೆಯಾದ್ಯಂತ 4 ಒಟ್ಟು 21ಪ್ರಕರಣಗಳಿವೆ. ಈ 21 ಪ್ರಕರಣಗಳು ಕೂಡ ಬ್ಲಾಕ್ ಮೇಲ್ ಪ್ರಕರಣಗಳು. ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ನೀಡಿರುವ ಎಲ್ಲಾ ದಾಖಲೆಗಳು ನಕಲಿ ಎಂದರು
ಪ್ರಮೋದ ದೇವಿ ಒಡೆಯರ್ ತಂದಿದ್ದ ತಡೆಯಾಜ್ಞೆ ತೆರವು: ನಾಳೆ ಮೊದಲ ಸಭೆ
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಸಂಬಂಧ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, 1-07-2024ರಂದು ಪ್ರಾಧಿಕಾರ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. 26-07-2024ರಂದು ಪ್ರಮೋದ ದೇವಿ ಒಡೆಯರ್ ರವರು ಸ್ಟೇ ತಂದಿದ್ದರು. ಚಾಮುಂಡಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂದಿದ್ದಾರೆ. ಆದರೆ ಈ ಹಿಂದಿನಿಂದಲೂ ರಾಜ್ಯ ಸರ್ಕಾರವೇ ಚಾಮುಂಡಿ ಬೆಟ್ಟ ನಿರ್ವಹಣೆ ಮಾಡುತ್ತಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿತ್ತು. ಸಂಪೂರ್ಣವಾಗಿ ಅಧಿಕಾರಿಗಳೇ ನಿರ್ವಹಣೆ ಮಾಡುವ ಪ್ರಾಧಿಕಾರ ಇದಾಗಿದೆ. ಈಗ ಪ್ರಮೋದ ದೇವಿ ಒಡೆಯರ್ ತಂದಿದ್ದ ತಡೆಯಾಜ್ಞೆಯನ್ನ ನ್ಯಾಯಾಲಯ ತೆರವುಗೊಳಿಸಿದೆ. ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ನಾಳೆ ಚಾಮುಂಡಿ ಬೆಟ್ಟ ಪ್ರಾಧಿಕಾರ ಅಧ್ಯಕ್ಷರಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಭೆ ಆಯೋಜನೆ ಮಾಡಲಾಗಿದೆ. ಚಾಮುಂಡೇಶ್ವರಿ ತಾಯಿ ದೇವಸ್ಥಾನ, ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ನಾವೆಲ್ಲರೂ ಮುಂದಾಗೋಣ ಎಂದರು.
ಸಿದ್ದಾರ್ಥ ಟ್ರಸ್ಟ್ ಗೆ ಕೆಐಎಡಿಬಿ ಜಮೀನು ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ರಾಜ್ಯಪಾಲರು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲು ಪತ್ರ ಬರೆದಿದ್ದಾರೆ. ರಾಜ್ಯಪಾಲರು ಈ ವಿಚಾರವಾಗಿ ಇಷ್ಟೊಂದು ತುರ್ತಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಿಗೆ ಮೌನ ವಹಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಮಾಡಿರೋ ಆರೋಪ ನಿರಾಧಾರ. ಸಿದ್ದಾರ್ಥ ಟ್ರಸ್ಟ್ ಗೆ ಕಾನೂನು ಬದ್ದವಾಗಿ ಜಮೀನು ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಜೆಪಿ ಅವಧಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಮೀನು ನೀಡಿದ್ದಾರೆ. ಯಾವ ಮಾನದಂಡ ಅನುಸರಿಸಿ ಜಮೀನು ನೀಡಲಾಗಿದೆ ಎಂದು ಪ್ರಶ್ನಿಸಿದರು.
ಮುಡಾದಲ್ಲಿ ಅಕ್ರಮ ನಡೆದಿರೋದೇ ಬಿಜೆಪಿ ಅವಧಿಯಲ್ಲಿ. 12 ವರ್ಷ ಅಧಿಕಾರ ನಡೆಸಿರೋ ನೀವು ಜನರಿಗೆ ಎಷ್ಟು ನಿವೇಶನ ಕೊಟ್ಟಿದ್ದೀರಾ ಹೇಳಿ. ಸಿದ್ದರಾಮಯ್ಯನವರ ಅವಧಿಯಲ್ಲಿ 5500 ನಿವೇಶನ ಹಂಚಿಕೆ ಮಾಡಲಾಗಿದೆ. ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ರೆ ನಮಗೆ ನೋಟಿಸ್ ನೀಡ್ತೀರಾ. ಸಾರ್ವಜನಿಕರಿಗೆ ನೀವು ಕೊಟ್ಟಿರುವ ನಿವೇಶನಗಳ ಬಗ್ಗೆ ಮಾಹಿತಿ ನೀಡಿ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.
ರಾಜ್ಯಪಾಲರು ಬಿಜೆಪಿ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ ರಾಜ್ಯಪಾಲರು ನನಗೆ ಯಾವುದೇ ಪತ್ರ ಬಂದಿಲ್ಲ ಎನ್ನುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬೆಳಿಗ್ಗೆ ಪತ್ರ ಬರೆದರೆ ಸಂಜೆಯೇ ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯಪಾಲರು ಬಿಜೆಪಿ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಭವನ ಬಿಜೆಪಿ ಕಚೇರಿಯಂತೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದರು.
Key words: Muda scam, Snehamai Krishna , documents, fake – M. Lakshman