ಮೈಸೂರು, ಡಿ.೨೮, ೨೦೨೪: (www.justkannada.in news) ಮಾಧ್ಯಮಗಳಲ್ಲಿ “ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘ” ಕ್ಕೆ ಸಂಬಂಧಿಸಿದ ಸುದ್ಧಿ ಪ್ರಸಾರ ಮಾಡದಂತೆ ನಿರ್ಬಂಧವಿಧಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ “ಮಧ್ಯಂತರ ತಡೆಯಾಜ್ಞೆ” ನೀಡಲು ನಿರಾಕರಿಸಿದೆ.
ಕಾಂಗ್ರೆಸ್ ಮುಖಂಡ ಹಾಗೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಧ್ಯಕ್ಷರಾಗಿರುವ “ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘ” ದಿಂದ ನಡೆದಿದೆ ಎಂದು ಹೇಳಲಾದ ಹಣ ದುರುಪಯೋಗ ಹಾಗೂ ನಿಯಮ ಬಾಹಿರ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘವು ಮಾದ್ಯಮಗಳ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮೈಸೂರಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರ ಮಾಡದಂತೆ ಕೋರಿದ್ದ ಅರ್ಜಿ ಸಂಬಂಧ, ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಜತೆಗೆ “ ಜಸ್ಟ್ ಕನ್ನಡ “ ಸೇರಿದಂತೆ ರಾಜ್ಯದ ಪ್ರಮುಖ ದಿನಪತ್ರಿಕೆಗಳು, ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ಆನ್ ಲೈನ್ ಮಾದ್ಯಮಗಳಿಗೆ ಈ ಸಂಬಂಧ ನೋಟಿಸ್ ಜಾರಿಗೊಳಿಸಿ ಪ್ರಕರಣ ವನ್ನೂ ಜನವರಿ 6 ಕ್ಕೆ ಮುಂದೂಡಿದೆ.
ಸುದ್ದಿ ಹಿನ್ನೆಲೆ:
ಈಗಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ಈ ನಡುವೆ ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ಕೂಡ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿದೆ.
ಈ ನಡುವೆ ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ನಡೆಸಿದ್ದಾರೆ ಎನ್ನಲಾಗಿರುವ ದೊಡ್ಡ ಅಕ್ರಮವೊಂದು ಬೆಳಕಿಗೆ ಬಂದಿದೆ ಎಂದು ಮಾಧ್ಯಮಗಳಲ್ಲಿ ಸುದ್ಧಿಯಾಗಿತ್ತು. ಆಯುಕ್ತರ ಅನುಮತಿ ಇಲ್ಲದೇ ಹೆಚ್.ವಿ.ರಾಜೀವ್ ಅವರು ಮೈಸೂರಿನ ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆಂಬ ಗಂಭೀರ ಆರೋಪವೊಂದು ಕೇಳಿ ಬಂದಿತ್ತು.
ಮೈಸೂರು ಜ್ಞಾನ ಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡವಾಣೆ ನಿರ್ಮಾಣ ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ ಎಂಬುದು ಆರೋಪ. ಈ “ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘ” ಕ್ಕೆ ಎಚ್.ವಿ ರಾಜೀವ್ ಅವರೇ ಅಧ್ಯಕ್ಷರಾಗಿರುವುದು ವಿಶೇಷ.
252 ಎಕರೆ ಜಾಗದ ಕೆಲವು ಸರ್ವೆ ನಂಬರ್ಗಳು ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ ಸದರಿ ಬಡವಾಣೆಗಳ ನಿವೇಶನ ಹಕ್ಕುಗಳನ್ನ ಮುಡಾ ವರ್ಗಾವಣೆ ಮಾಡಬಾರದೆಂದು ಆದೇಶವಿದೆ. ಹೀಗಿದ್ದರೂ ಹೆಚ್.ವಿ ರಾಜೀವ್ 848 ನಿವೇಶನಗಳನ್ನ ಒಂದೇ ದಿನದಲ್ಲಿ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಆಯುಕ್ತರ ಅನುಮೊದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನಗಳನ್ನ ಬಿಡುಗಡೆಗೊಳಿಸಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬಂದಿತ್ತು.
ಆಯುಕ್ತರೇ ಪತ್ರ ಬರೆದಿದ್ದರು:
ಮುಡಾ ಆಯುಕ್ತರ ಅನುಮೋದನೆ ಇಲ್ಲದೆ ಖಾತೆ ಮಾಡಿಸಿಕೊಳ್ಳಲಾಗಿದೆ . ಈ ಬಗ್ಗೆ ಕೆಲ ದಾಖಲೆಗಳು ಲಭ್ಯವಾಗಿವೆ. ಆಯುಕ್ತರ ಅನುಮೋದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನ ಬಿಡುಗಡೆಗೊಳಿಸಿಕೊಂಡಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಹಿಂದಿನ ಮುಡಾ ಆಯುಕ್ತ ನಟೇಶ್ ಪತ್ರ ಬರೆದಿರುವುದು ಬಹಿರಂಗಗೊಂಡಿತ್ತು.
ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಶಾಸಕರ ಹೇಳಿಕೆ :
ಬಿಜೆಪಿ ಶಾಸಕ ಶ್ರೀವತ್ಸ ಅವರು ಹಗರಣ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲಾ ಹಗರಣಗಳನ್ನು ಮಾಡಿ ರಕ್ಷಣೆ ಮಾಡಿಕೊಳ್ಳಲೆಂದೇ ಎಚ್.ವಿ. ರಾಜೀವ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ದೂಷಿಸಿದ್ದರು.
ಕಾಮಗಾರಿ ಪೂರ್ಣಗೊಳ್ಳದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಆದರೂ ಸರ್ಕಾರ ಮಾತ್ರ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಯಾರೇ ತಪ್ಪು ಮಾಡಿದ್ದರೂ ಅವರನ್ನು ರಕ್ಷಿಸದೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು.
ಮಾಧ್ಯಮಗಳಲ್ಲಿ ಈ ಸುದ್ಧಿ ಪ್ರಸಾರಗೊಂಡ ಬೆನ್ನಲ್ಲೇ ಜ್ಞಾನಗಂಗಾ ಗೃಹ ನಿರ್ಮಾಣ ಸಂಘ ಕೋರ್ಟ್ ಮೊರೆ ಹೋಗಿ, ಮಧ್ಯಂತರ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿ ಮಾಧ್ಯಮಗಳಿಗೆ ನೋಟಿಸ್ ಜಾರಿ ಮಾಡಿದೆ.
key words: MUDA SCAM, Court, rejects, “Gyanaganga Society”, interim injunction, media.
SUMMARY:
MUDA SCAM: Court rejects application filed by “Gyanaganga Society” seeking interim injunction against media.