MUDA SCAM: ಅತೀ ಕಡಿಮೆ ಬೆಲೆಗೆ ನಿವೇಶನ ಹಂಚಿಕೆ ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

MUDA SCAM: Mysuru Urban Development Authority allocates plots at lowest price

 

Officials of the Mysuru Urban Development Authority (MUDA) have allotted a 50×80 feet plot adjacent to the corner site facing the Ring Road in the prestigious Hanchya-Sathagalli Layout ‘B’ zone of the city at a cost of just Rs. 3,03,000 .

ಮೈಸೂರು, ಆ.07,2024; (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು, ನಗರದ ಪ್ರತಿಷ್ಠಿತ ಹಂಚ್ಯಾ-ಸಾತಗಳ್ಳಿ ಬಡಾವಣೆ ʼಬಿʼ ವಲಯದಲ್ಲಿ ರಿಂಗ್ ರಸ್ತೆಗೆ ಅಭಿಮುಖವಾಗಿರುವ ಕಾರ್ನರ್ ಸೈಟ್ ಪಕ್ಕದ ೫೦x೮೦ ಅಡಿ ನಿವೇಶನವನ್ನು ವ್ಯಕ್ತಿಯೊಬ್ಬರಿಗೆ ಕೇವಲ ೩.೦೩,೦೦೦ ರೂ. ಗಳಿಗೆ ಹಂಚಿಕೆ ಮಾಡಿದ್ದಾರೆ.

ಇದೇ ೨೦೨೪ರ ಮೇ ೨೨ರಂದು ಮೈಸೂರಿನ ಸಿದ್ಧಾರ್ಥನಗರದ ಮೋಕ್ಷ ಮಾರ್ಗ ೧೦ನೇ ಕ್ರಾಸ್ ನಿವಾಸಿ ನಾಗರಾಜು ಅವರ ಮಗ ಎಂ.ಎನ್. ನಂದೀಶ ಎಂಬುವರ ಹೆಸರಿಗೆ ಹಂಚ್ಯಾ-ಸಾತಗಳ್ಳಿ ಬಿ ವಲಯ ಬಡಾವಣೆಯಲ್ಲಿರುವ ೩೬ನೇ ಸಂಖ್ಯೆಯ ಪೂರ್ವ-ಪಶ್ಚಿಮ ೨೪ ಮೀ. ಮತ್ತು ಉತ್ತರ-ದಕ್ಷಿಣಕ್ಕೆ ೧೫ ಮೀ. (೫೦x೮೦ ಅಡಿ) ಒಟ್ಟು ೩೬೦ ಚದರ ಮೀಟರ್ ವಿಸ್ತೀರ್ಣದ ರಿಂಗ್ ರಸ್ತೆಗೆ ಅಭಿಮುಖವಾಗಿರುವ ಮೂಲೆ ನಿವೇಶನ ಪಕ್ಕದ ನಿವೇಶನಕ್ಕೆ ಕ್ರಯಪತ್ರ ನೀಡಲಾಗಿದೆ.

ಮುಡಾ ಕಚೇರಿಯಲ್ಲಿರುವ ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಎಂ.ಎನ್. ನಂದೀಶ ಎಂಬುವರಿಗೆ ಸದರಿ ನಿವೇಶನದ ಕ್ರಯಪತ್ರವನ್ನು ಮೇ ೨೨ರಂದೇ ನೋಂದಣಿ ಮಾಡಿಕೊಟ್ಟಿದ್ದಾರೆ.

ಮೇ ೧೬ರಂದು ಹಂಚಿಕೆ:

೨೦೨೪ರ ಮೇ ೧೬ರಂದು ನಿವೇಶನವನ್ನು ಹಂಚಿಕೆ ಮಾಡಲಾಗಿದ್ದು, ಕೇವಲ ೬ ದಿನಗಳಲ್ಲಿ ಅಂದರೆ ಮೇ ೨೨ರಂದೇ ಕ್ರಯಪತ್ರ ನೋಂದಣಿ ಮಾಡಿಕೊಡಲಾಗಿದೆ.

ಪೂರ್ಣ ಮಾಲೀಕತ್ವ:

ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ವಾಣಿಜ್ಯ ಬಳಕೆಗೆ ಅನುಕೂಲವಾದ ೫೦x೮೦ ಅಡಿ ಅಳತೆಯ ನಿವೇಶನವನ್ನು ಹಂಚಿಕೆ ಮಾಡಿರುವ ಜೊತೆಗೆ ಖರೀದಿದಾರರಿಗೆ ಎಲ್ಲಾ ಸ್ವತಂತ್ಯ ವಿಶೇಷಾಧಿಕಾರ, ಅನುಭೋಗ, ಸ್ವಾಧೀನ ನೀಡಲಾಗಿದೆ. ಹಾಗೂ ಸ್ವತ್ತಿಗೆ ಸೇರಿದ ಪೂರ್ವಾಧಿಗಳು, ಕಾನೂನುಬದ್ಧ ಹೊರ ದೂಡುವಿಕೆ, ತೆರಿಗೆ, ಬಾಕಿ ಮತ್ತು ಯಾವುದೇ ರೀತಿಯ ಕ್ಲೇಮುಗಳಿಂದ ಮುಕ್ತವಾಗಿಸಿ ಸಂಪೂರ್ಣ ಹಕ್ಕು, ಮಾಲೀಕತ್ವ ನೀಡಲಾಗಿದೆ ಎಂದು ನೋಂದಾಯಿತ ಕ್ರಯಪತ್ರದಲ್ಲಿ ನಮೂದಿಸಲಾಗಿದೆ.

ನಿವೇಶನದ ಚೆಕ್ಕುಬಂದಿ:

ಹಂಚ್ಯಾ-ಸಾತಗಳ್ಳಿ ಬಿ ವಲಯ ಬಡಾವಣೆ (ವಿಟಿಯು ಬಳಿ) ರಿಂಗ್ ರಸ್ತೆಯಲ್ಲಿರುವ ನಿವೇಶನ ಸಂಖ್ಯೆ ೩೫ರ ಚೆಕ್ಕುಬಂದಿ ಪೂರ್ವಕ್ಕೆ ನಿ. ಸಂ. ೪೦ ಮತ್ತು ೩೯, ಪಶ್ಚಿಮಕ್ಕೆ ರಿಂಗ್ ರಸ್ತೆ, ಉತ್ತರಕ್ಕೆ ನಿ. ಸಂಖ್ಯೆ ೩೭ ಆಗಿದೆ.

ಅಧಿಸೂಚನೆ ಇಲ್ಲದೆ ಹಂಚಿಕೆ:

ಹೊಸ ಬಡಾವಣೆ ರಚಿಸಿದಾಗ ನಿವೇಶನ ಹಂಚಿಕೆಗಾಗಿ ಸುದ್ದಿ ಮಾಧ್ಯಮದಲ್ಲಿ, ವೆಬ್‌ಸೈಟ್ ಮೂಲಕ ಅಧಿಸೂಚನೆ ಪ್ರಕಟಿಸಿ, ಅರ್ಜಿಗಳನ್ನು ಆಹ್ವಾನಿಸಿ ನಿಯಮಾನುಸಾರ ಅರ್ಹ ಆಕಾಂಕ್ಷಿಗಳಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮ ೧೯೯೧ ಹೇಳುತ್ತದೆ.

ಆದರೆ, ಆರ್‌ಟಿ ನಗರ ಮತ್ತು ಲಲಿತಾದ್ರಿಪುರ ವಸತಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿದ ಬಳಿಕ ಕಳೆದ ಈವರೆಗೆ ಮುಡಾ ಯಾವ ಹೊಸ ಬಡಾವಣೆಯನ್ನೂ ರಚಿಸಿಲ್ಲವೆಂದ ಮೇಲೆ ೨೦೨೪ರ ಮೇ ೧೬ರಂದು ನಂದೀಶ ಎಂಬುವರಿಗೆ ನಿವೇಶನ ಹಂಚಿಕೆ ಪತ್ರವನ್ನು ಯಾವ ನಿಯಮದಡಿ ನೀಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಭೆ ಗಮನಕ್ಕೂ ತಂದಿಲ್ಲ:

ಪ್ರತಿಷ್ಠಿತ ಬಡಾವಣೆಯ ಕೋಟ್ಯಾಂತರ ರೂ. ಬೆಲೆ ಬಾಳುವ ನಿವೇಶನವನ್ನು ಹಂಚಿಕೆ ಮಾಡುವ ಮೊದಲು ಮುಡಾ ಸಾಮಾನ್ಯ ಸಭೆ ಮುಂದಿಟ್ಟು ಚರ್ಚಿಸಿಲ್ಲ ಅಥವಾ ನಿವೇಶನ ಹಂಚಿಕೆಗೆ ಕಾರಣ ನೀಡಿಲ್ಲ.

ಯುದ್ಧದಲ್ಲಿ ಹೋರಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮನ ಪತ್ನಿ ಪರಿಪರಿಯಾಗಿ ಬೇಡಿಕೊಂಡರೂ, ನಾಲ್ಕು ವರ್ಷಗಳಿಂದ ಸತಾಯಿಸಿ ಕಡೆಗೆ ಮುಂದೆ ಅಧಿಸೂಚನೆ ಹೊರಡಿಸಿದಾಗ ಆದ್ಯತೆ ಮೇಲೆ ಪರಿಗಣಿಸಲಾಗುವುದೆಂದು ಹಿಂಬರಹ ನೀಡಿ ಅಮಾನವೀಯತೆ ಪ್ರದರ್ಶಿಸಿರುವ ಮುಡಾ ಅಧಿಕಾರಿಗಳು, ನಂದೀಶ ಎಂಬುವರಿಗೆ ೫೦x೮೦ ಅಡಿ ಅಳತೆಯ ನಿವೇಶನವನ್ನು ನೀಡಿದ್ದಾದರೂ ಹೇಗೆ ಎಂಬುದೇ ಯಕ್ಷ ಪ್ರಶ್ನೆ.?

key words: MUDA SCAM,Mysuru Urban Development Authority, allocates, plots, at lowest price.

 

SUMMARY:

Officials of the Mysuru Urban Development Authority (MUDA) have allotted a 50×80 feet plot adjacent to the corner site facing the Ring Road in the prestigious Hanchya-Sathagalli Layout ‘B’ zone of the city at a cost of just Rs. 3,03,000 .