ಮೈಸೂರು, ನ.21, 2020 :(www.justkannada.in news) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ‘ ನಿವೇಶನ ಗೋಲ್ ಮಾಲ್ ‘ ಪ್ರಕರಣ ಹಾಗೂ ಮಂಜೂರಾದ ಏಳು ನಿವೇಶನಗಳನ್ನು ಒಂದೇ ದಿನ ಪ್ರಾಧಿಕಾರಕ್ಕೆ ಮತ್ತೆ ಹಿಂದಿರುಗಿಸಿದ ಪ್ರಕರಣಗಳ ತನಿಖೆ ನಡೆಸಲು ಎಸಿಬಿಗೆ ದೂರು ನೀಡಲು ಮುಡಾ ಮುಂದಾಗಿದೆ.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಆಯುಕ್ತ ಡಾ.ನಟೇಶ್ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.
ನಿವೃತ್ತ ಐಎಫ್‌ಎಸ್ ಅಧಿಕಾರಿ ಪತ್ನಿಯು ಮುಡಾ ವ್ಯಾಪ್ತಿಗೆ ಬರುವ ವಿಜಯನಗರ ಬಡಾವಣೆಯಲ್ಲಿ ಮಂಜೂರಾಗಿದ್ದ ನಿವೇಶನವನ್ನು ಕ್ರಯಪತ್ರ ಮಾಡಿಸಿಕೊಂಡು, ನಂತರ ವಾಪಸ್ ಸ್ವತ್ತನ್ನು ಹಿಂತಿರಿಗಿಸಿದ್ದ ಪ್ರಕರಣ ಬೆಳಕಿಗೆ ಬಂದು ಮುಡಾದಲ್ಲಿನ ಗೋಲ್ ಮಾಲ್ ಬೆಳಕಿಗೆ ಬಂದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರಿಂದ ಸಾಕಷ್ಟು ಅನುಮಾನ, ಶಂಕೆಗಳು ವ್ಯಕ್ತವಾದವು.ಮುಡಾ ಅಧಿಕಾರಿಗಳ ಶಾಮಿಲು ಇಲ್ಲದೆ ಇದು ಸಾಧ್ಯವೆ..? ಅದು ಕೇವಲ ಒಂದೇ ದಿನದಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಇದು ಹೇಗೆ ಸಾಧ್ಯ..? ಜನ ಸಾಮಾನ್ಯರು ತಿಂಗಳುಗಟ್ಟಲೇ ಮುಡಾಗೆ ಅಲೆದಾಡಿದರು ಆಗದ ಕೆಲಸ, ಈ ಪ್ರಕರಣದಲ್ಲಿ ಒಂದೇ ದಿನದಲ್ಲಿ ಹೇಗೆ ಸಾಧ್ಯವಾಯಿತು ಎಂದು ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗರೆದರು.
ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪ್ರಕರಣದ ಬಗ್ಗೆ ನನ್ನ ಗಮನಕ್ಕೆ ಬರುತ್ತಿದ್ದಂತೆ ಪ್ರಾಮಾಣಿಕವಾಗಿ ಕ್ರಮಕ್ಕೆ ಸೂಚಿಸಿ ಪ್ರಾಧಿಕಾರಕ್ಕೆ ಉಂಟಾಗಿದ್ದ ನಷ್ಟವನ್ನು ತಪ್ಪಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.ಆಗ, ನಿವೇಶನ ಹಿಂಪಡೆದಿದ್ದೇನೋ ನಿಜ. ಆದರೆ ಈ ಘಟನೆಗೆ ಕಾರಣಕರ್ತರಾದವರ ವಿರುದ್ಧ ಯಾವ ಕ್ರಮ ಜರುಗುಸಿದ್ದೀರಿ..? ಕಡೆ ಪಕ್ಷ ತಪ್ಪಿತಸ್ಥರು ಯಾರು..? ಎಂಬುದಾದದರು ತಿಳಿದಿದೆಯೇ..? ಎಂಬ ಪ್ರಶ್ನೆಗಳು ತೂರಿ ಬಂದವು.
ಕೂಡಲೇ ಪ್ರತಿಕ್ರಿಯಿಸಿದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ತನಿಖೆಗೆ ದೂರು ನೀಡುವಂತೆ ಮುಡಾ ಆಯುಕ್ತ ಡಾ.ನಟೇಶ್ ಅವರಿಗೆ ಪತ್ರಿಕಾಗೋಷ್ಠಿಯಲ್ಲೇ ಸೂಚನೆ ನೀಡಿದರು.
oooo
KEY WORDS : MUDA-site-ACB-police-complaint-mysore