ಮೈಸೂರು,ಜುಲೈ, 27,2024(www.justkannada.in): ಮುಡಾದಿಂದ ವಿಪಕ್ಷಗಳ ಮುಖಂಡರೂ ಸಹ ಸೈಟ್ ಪಡೆದಿದ್ದಾರೆಂದು ಆರೋಪಿಸಿ ನಿನ್ನೆ ಪಟ್ಟಿ ಬಿಡುಗಡೆ ಮಾಡಿದ್ದ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಜಿ.ಟಿ.ದೇವೇಗೌಡರಿಗೆ ಮಾದಗಳ್ಳಿಯಲ್ಲಿ 1 ಎಕರೆ ಜಾಗ ಕೊಟ್ಟಿದ್ದೇವೆ ಎಂದು ಸಚಿವ ಭೈರತಿ ಸುರೇಶ್ ಸಿಎಂ ಪಕ್ಕದಲ್ಲಿ ಕೂರಿಸಿಕೊಂಡು ಹೇಳಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ನನ್ನಂಥ ರಾಜಕಾರಣಿ ಈ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಯಾರು ಇಲ್ಲ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಸಾಲ ಮಾಡಿಕೊಂಡು ರಾಜಕಾರಣ ಮಾಡಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದ ಮಂತ್ರಿಗಳು ಜವಾಬ್ದಾರಿಯಿಂದ ಇಲಾಖೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನನ್ನ ರಾಜಕೀಯ ಜೀವನ ನಿಮಗೆ ಗೊತ್ತಿಲ್ಲ. ನಾನು ಯಾವುದೇ ಒಂದು ಚೌಲ್ಟ್ರಿ, ಪೆಟ್ರೋಲ್ ಬಂಕ್, ಸ್ಕೂಲ್, ಕಮರ್ಷಿಯಲ್ ಬಿಲ್ಡಿಂಗ್ ಮಾಡಿಲ್ಲ. ನನ್ನ ತಂದೆ 15 ಎಕರೆ ಜಾಗ ಮಾಡಿದ್ದರು. ಪ್ರಗತಿಪರ ರೈತನಾಗಿ ದುಡಿದು ಪಕ್ಕದಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಸಾಲಗಾರನಾಗಿ ರಾಜಕಾರಣ ಮಾಡುತ್ತಿದ್ದೇನೆ. ಮುಡಾದ ಶೇ.90ರಷ್ಟು ಜಾಗ ಇರೋದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ. ಗೋವಿಂದರಾಜು ಅಧ್ಯಕ್ಷರಾಗಿದ್ದಾಗ ಜಯಲಕ್ಷ್ಮಿಪುರಂ ಬಾಡಿಗೆ ಮನೆಯಲ್ಲಿದ್ದೆ. ಲಾಟರಿಯಲ್ಲಿ 50×80 ಸೈಟ್ ಬಂದಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಸೈಟ್ ಪಡೆದಿಲ್ಲ ಎಂದು ಜಿ.ಟಿ ದೇವೇಗೌಡ ತಿಳಿಸಿದರು.
ಜೆಡಿಎಲ್ ಪಿ ನಾಯಕ ಸ್ಥಾನ ತಪ್ಪಿದ್ದಕ್ಕೆ ಬೇಸರವೂ ಇಲ್ಲ
JDS ಶಾಸಕಾಂಗ ಪಕ್ಷದ ನಾಯಕ ಸ್ಥಾನ ತಪ್ಪಿದ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ಜೆಡಿಎಲ್ ಪಿ ನಾಯಕ ಸ್ಥಾನ ತಪ್ಪಿದ್ದಕ್ಕೆ ನನಗೆ ಯಾವುದೇ ಬೇಸರವೂ ಇಲ್ಲ. JDLP ನಾಯಕ ಸುರೇಶ್ ಬಾಬು ಅವರನ್ನ ನಾನೇ ಅಭಿನಂದಿಸಿದ್ದೇನೆ. ನನಗೆ ಯಾಕೆ ತಪ್ಪಿತು ಅಂತಾ ಈಗ ಹೋಗಿ ನಾನು ಕೇಳಲಾಗುತ್ತಾ? ಈಗ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರು, ದೊಡ್ಡವರು. ಕೇಂದ್ರ ಮಂತ್ರಿಗಳನ್ನು ಯಾಕೆ, ಏನೆಂದು ಪ್ರಶ್ನೆ ಮಾಡಲು ಸಾಧ್ಯವಾ ಎಂದರು.
Key words: Muda site, Minister Bhairati Suresh, GT Deve Gowda, legal