ಮೈಸೂರು,ಆಗಸ್ಟ್,1,2024 (www.justkannada.in): ಮುಡಾ ಮತ್ತು ವಾಲ್ಮೀಕಿ ಹಗರಣಗಳನ್ನ ವಿಪಕ್ಷಗಳು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ. ಹೀಗಾಗಿ ಬಿಜೆಪಿ ಪಾದಯಾತ್ರೆಗೆ ಸರ್ಕಾರ ಅನುಮತಿ ಕೊಡಬಾರದು ಎಂದು ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಜಿಲ್ಲಾ ಸಮಿತಿ ಅಧ್ಯಕ್ಷ ಜಗದೀಶ್ ಸೂರ್ಯ ಮನವಿ ಮಾಡಿದರು.
ಮುಡಾ ಹಗರಣ ಕುರಿತು ನಗರದ ಜಿಲ್ಲಾ ಪ್ರತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಜಿಲ್ಲಾ ಸಮಿತಿ ಅಧ್ಯಕ್ಷ ಜಗದೀಶ್ ಸೂರ್ಯ, ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣವನ್ನ ನಿವೃತ್ತ ನ್ಯಾಯಾಧೀಶರಾದ ಬಿ .ಪಿ ದೇಸಾಯಿ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನ ನೇಮಕ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ವಾಲ್ಮೀಕಿ ನಿಗಮ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸುತ್ತೇವೆ. ಪ್ರಕರಣಗಳನ್ನ ಸಿಬಿಐಗೆ ವಹಿಸಬೇಕು ಎಂದು ವಿಪಕ್ಷಗಳು ಒತ್ತಡ ಹಾಕುತ್ತಿವೆ. ಅವರ ಒತ್ತಡಕ್ಕೆ ಮಣಿದು ಸಿಬಿಐಗೆ ವಹಿಸಿದರೆ ಸ್ಥಳೀಯ ತನಿಖಾ ಸಂಸ್ಥೆಯಗಳ ಬಗ್ಗೆ ಜನಸಾಮಾನ್ಯರಲ್ಲಿ ವಿಶ್ವಾಸ ಕಡಿಮೆ ಆಗುತ್ತದೆ. ಸ್ಥಳೀಯ ಸಂಸ್ಥೆ ಮತ್ತು ನಿವೃತ್ತ ನ್ಯಾಯಾಧೀಶರ ತನಿಖೆಗೆ ಮುಂದಾಗಿರುವ ಸರ್ಕಾರದ ನಡೆ ಸರಿಯಾಗಿದೆ ಎಂದರು.
ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣಗಳನ್ನ ವಿಪಕ್ಷಗಳು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡು ಪರಸ್ಪರ ಕೆಸರೆರಚಾಡಿಕೊಳ್ಳುತ್ತಿದ್ದಾರೆ. ಆಗಸ್ಟ್ 3 ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ರಾಜಕೀಯ ಮಾಡಲು ಹೊರಟಿದ್ದಾರೆ. ವಿಪಕ್ಷಗಳ ಈ ನಡೆ ಖಂಡನೀಯ, ಅನವಶ್ಯಕ ಪಾದಯಾತ್ರೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಲು ಹೊರಟಿದ್ದಾರೆ. ಇದಕ್ಕೆ ಸರ್ಕಾರದ ಅನುಮತಿ ಕೊಡಬಾರದು. ಈಗಾಗಲೇ ಪ್ರಕರಣಗಳನ್ನ ಉನ್ನತ ಮಟ್ಟದ ತನಿಖೆಗೆ ವಹಿಸಿದೆ ಆದರೂ ಬಿಜೆಪಿ ಜೆಡಿಎಸ್ ನಾಯಕರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮಾರ್ಕ್ ವಾದಿ ಪಾರ್ಟಿ ಖಂಡಿಸುತ್ತದೆ ಎಂದು ಜಗದೀಶ್ ಸೂರ್ಯ ಹೇಳಿದರು.
Key words: Muda, Valmiki scandal, bjp, politics, Communist Party