ಮೈಸೂರು,ಸೆಪ್ಟಂಬರ್,26,2024 (www.justkannada.in): ಮುಡಾದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆಯಾದ ಉದ್ದೇಶಕ್ಕೆ ಬಳಸದೇ ನಿಯಮ ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಹೀಗಾಗಿ ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನ ಮಾಹಿತಿ ಸಂಗ್ರಹಣೆಗೆ ಸೂಚನೆ ನೀಡಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದ್ದಾರೆ.
ಇಂದು ಮುಡಾ ಅಧ್ಯಕ್ಷರು ಪ್ರಾಧಿಕಾರದ ಆಯುಕ್ತರು ಹಾಗೂ ಎಲ್ಲಾ ಶಾಖಾ ಮುಖ್ಯಸ್ಥರೊಡನೆ ಸಭೆಯನ್ನು ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಮರೀಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕುರಿತು ರಾಜ್ಯದಲ್ಲಿನ ಸುದ್ದಿವಾಹಿನಿಗಳಲ್ಲಿ ದಿನಂಪ್ರತಿ ವಿಚಾರಗಳನ್ನು ಬಿತ್ತರಿಸಲಾಗುತ್ತಿದೆ. ಇದರಿಂದಾಗಿ ಶತಮಾನದ ಇತಿಹಾಸವಿರುವ ಪ್ರಾಧಿಕಾರದ ಗೌರವವು ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಬಿಂಬಿಸುತ್ತಿರುವುದನ್ನು ಬೇಸರದ ಸಂಗತಿಯಾಗಿದೆಯೆಂದು ತಿಳಿಸಿದರು. ಹಾಗೂ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಪ್ರಾಧಿಕಾರದ ಹಿತಾಸಕ್ತಿ ಹಾಗೂ ಗೌಪ್ಯತೆಯನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಹಾಗೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದೆ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆಯಾದ ಉದ್ದೇಶಕ್ಕೆ ಬಳಸದೇ ನಿಯಮ ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿರುವುದನ್ನು ಗಂಭಿರವಾಗಿ ಪರಿಗಣಿಸಿದೆ. ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಾಗರೀಕ ಸೌಲಭ್ಯ ನಿವೇಶನಗಳ ವಿವರಗಳನ್ನ ಪರಿಶೀಲಿಸಿ ವರದಿ ನೀಡಬೇಕು. ಒಟ್ಟು ನಾಗರೀಕ ಸೌಕರ್ಯ ನಿವೇಶನಗಳ ಸಂಖ್ಯೆ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿರುವ ವಿವರ, ನ್ಯಾಯಾಲಯದಲ್ಲಿ ನಾಗರೀಕ ಸೌಕರ್ಯ ನಿವೇಶನ ಸಂಬಂಧಿಸಿದಂತೆ ಪ್ರಕರಣಗಳ ವಿವರ, ನಿಯಮ ಉಲ್ಲಂಘಿಸಿರುವ ನಾಗರೀಕ ಸೌಕರ್ಯ ನಿವೇಶನಗಳ ವಿವರದ ಬಗ್ಗೆ ವರದಿ ನೀಡುವಂತೆ ಕೆ.ಮರೀಗೌಡ ಸೂಚಿಸಿದ್ದಾರೆ.
ಎಲ್ಲಾ ವಲಯ ಅಧಿಕಾರಿಗಳು , ವಿಶೇಷ ತಹಸೀಲ್ದಾರ್ ರವರು ತಮ್ಮ ತಮ್ಮ ವಲಯಗಳಲ್ಲಿ ನಿಯಮ ಉಲ್ಲಂಘನೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳ ವಿವರಗಳನ್ನು ಕೂಡಲೇ ಸಲ್ಲಿಸಬೇಕು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾವಿರಾರು ಕೋಟಿ ಬೆಲೆಬಾಳುವ ಖಾಲಿ ಇರುವ ಜಮೀನು / ಆಸ್ತಿಗಳನ್ನು ಅನಧಿಕೃತವಾಗಿ ಒತ್ತುವರಿಯಾಗಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದು, ಇವುಗಳನ್ನು ಕೂಡಲೇ ಪತ್ತೆಹಚ್ಚಲು ಹಾಜರಿದ್ದ ಎಲ್ಲಾ ವಲಯ ಅಧಿಕಾರಿಗಳಿಗೆ ಕೆ.ಮರೀಗೌಡ ಸೂಚಿಸಿದ್ದಾರೆ.
ಕಾರ್ಯದರ್ಶಿಗಳು ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಖಾಲಿ ಇರುವ ಪ್ರಾಧಿಕಾರದ ಜಮೀನು, ಆಸ್ತಿಗಳನ್ನು ನಿಖರವಾಗಿ ಸರ್ವೆ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ಮುಲಾಜಿಸಲ್ಲದೇ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು. ಹಾಗೂ ಪ್ರಾಧಿಕಾರದ ಜಮೀನು, ಆಸ್ತಿಗಳನ್ನು ಸಂರಕ್ಷಿಸಲು ತಂತಿಬೇಲಿ ಅಳವಡಿಸಿ ಪ್ರಾಧಿಕಾರದ ಆಸ್ತಿಯೆಂದು ಕಡ್ಡಾಯವಾಗಿ ನಾಮಫಲಕ ಅಳವಡಿಸಲು ಸೂಚಿಸಲಾಯಿತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಾಗರೀಕ ಸೌಕರ್ಯ ನಿವೇಶನಗಳ ವಾರ್ಷಿಕ ಗುತ್ತಿಗೆ ಹಣ ಮತ್ತು ತೆರಿಗೆಗಳನ್ನು ಸಂಗ್ರಹಿಸಲು ಅಗತ್ಯ ಕ್ರಮವಹಿಸಲು ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಬಡಾವಣೆಗಳನ್ನು ಕೈಗೆತ್ತಿಗೊಳ್ಳಲು ಈ ಹಿಂದೆಯು ಸೂಚಿಸಲಾಗಿದ್ದು, ಪ್ರಾಧಿಕಾರದ ಮುಖ್ಯ ಆದ್ಯತೆಯಂತೆ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲು ಅನುವಾಗುವಂತೆ ಈ ಹಿಂದೆ ರೈತರ ಸಹಭಾಗಿತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಬಲ್ಲಹಳ್ಳಿ ಹಾಗೂ ಬೊಮ್ಮೇನಹಳ್ಳಿ ಬಡಾವಣೆಯನ್ನು ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರಗಳನ್ನು ನೀಡಲು ತಿಳಿಸುತ್ತಾ, ಗುಂಪು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಮರೀಗೌಡ ಸೂಚಿಸಿದರು.
ದಸರಾ ಮಹೋತ್ಸವ ಕಳೆದ ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಅದರಂತೆ ಪ್ರಾಧಿಕಾರದ ಎಲ್ಲಾ ಅಧಿಕಾರಿಗಳಿಗೆ ಸಾಮಾನ್ಯ ಸಭೆಗೆ ಮಂಡಿಸಲಾಗುವ ವಿಷಯಗಳನ್ನು ಪೂರ್ಣ ಮಾಹಿತಿಯೊಡನೆ ಸಲ್ಲಿಸಲು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ಬೆಳಗಿನಿಂದ ಸಂಜೆಯವರಗೆ ಪ್ರಾಧಿಕಾರದಲ್ಲಿ ಕಾರಿಡಾರ್‌ಗಳಲ್ಲಿ ಕಾಯುತ್ತಿರುವುದನ್ನು ಗಮನಿಸಲಾಗಿದ್ದು, ಇದರಿಂದಾಗಿ ಶಾಖೆಗಳಲ್ಲಿ ವಿಷಯ ನಿರ್ವಾಹಕರು ಕಡತಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದಾಗಿ ಪ್ರಾಧಿಕಾರದಲ್ಲಿ ಇನ್ನು ಮುಂದೆ ಸಾರ್ವಜನಿಕರ ಸಂದರ್ಶನದ ಸಮಯವನ್ನು ಅಪರಾಹ್ನ 3-00 ರಿಂದ 5-30 ಗಂಟೆವರೆಗೆ ಕಡ್ಡಾಯವಾಗಿ ನಿಗಧಿಪಡಿಸಲು ತಿಳಿಸಿಸುತ್ತಾ, ಈ ಸಮಯದಲ್ಲಿ ಅಧಿಕಾರಿಗಳು / ನೌಕರರು ಸಾರ್ವಜನಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಡಾ ಅಧ್ಯಕ್ಷ ಮರೀಗೌಡ ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸುವ ಅರ್ಜಿಗಳಿಗಾಗಿ ಪ್ರತ್ಯೇಕ ಕೌಂಟರ್‌ನ್ನು ತೆರೆಯಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಿಳಿಸಿದರು.
Key words: MUDA, violation, rule, Notification, collection, CA site