ಮೈಸೂರು,ಫೆಬ್ರವರಿ,15,2021(www.justkannada.in) : ಪಂಚಲಿಂಗಗಳಲ್ಲಿ ಒಂದಾದ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಇತಿಹಾಸವಿದೆ. ಇದನ್ನು ದಕ್ಷಿಣ ಭಾರತದ ಶ್ರೀಶೈಲ ಎಂದೂ ಕರೆಯುತ್ತಾರೆ. ಅಂದರೆ ಸ್ವಾಮಿ ಮಲ್ಲಿಕಾರ್ಜುನ ದೇವರ ಶಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿ, ಶ್ರೀ ಮಲ್ಲಿಕಾರ್ಜುನ ಬೆಟ್ಟದಲ್ಲಿ ಪ್ರತಿ ಮಾಘ ಮಾಸದಲ್ಲಿ ಈ ಜಾತ್ರಾ ಮಹೋತ್ಸವ ನಡೆಯುತ್ತಾ ಬಂದಿದೆ. ಇದಕ್ಕೆ ಭಕ್ತಾದಿಗಳೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸೇವೆ ಸಲ್ಲಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ತೆಪ್ಪೋತ್ಸವ, ಮಂಟಪೋತ್ಸವಗಳೂ ಸಹ ಈ ಜಾತ್ರೆಯ ಆಕರ್ಷಣೆಯಲ್ಲೊಂದಾಗಿದೆ. ಇಂಥ ಒಂದು ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯುಳ್ಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸೌಭಾಗ್ಯ ಎಂದರು.
ಈ ಜಾತ್ರಾ ಮಹೋತ್ಸವಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಇಲ್ಲಿ ನಡೆಯುವ “ದನಗಳ ಜಾತ್ರೆ” ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ನಮ್ಮ ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ತಳಿಗಳ 1500 ಜೋಡಿಗಳಿಗೂ ಹೆಚ್ಚು ರಾಸುಗಳು ಈ ಜಾತ್ರೆಗೆ ಆಗಮಿಸುತ್ತವೆ. ಇಲ್ಲಿ ಒಂದು ಜೋಡಿ ಎತ್ತುಗಳು ಸುಮಾರು 5 ಲಕ್ಷ ರೂಪಾಯಿ ವರೆಗೂ ಮಾರಾಟವಾಗಿರುವ ನಿದರ್ಶನಗಳಿವೆ ಎಂದು ಹೇಳಿದರು.
ಇದಲ್ಲದೆ, ಉತ್ತಮ ರಾಸುಗಳಿಗೆ ಪಶುಸಂಗೋಪನಾ ಇಲಾಖೆ ವತಿಯಿಂದ ಬಹುಮಾನ ನೀಡುವ ಪರಿಪಾಠವೂ ಬೆಳೆದುಕೊಂಡು ಬಂದಿದ್ದು, ಸರ್ಕಾರದ ಮುಖಾಂತರೂ ಪ್ರೋತ್ಸಾಹ ಕೊಡುತ್ತಾ ಬರಲಾಗುತ್ತಿದೆ. ಇದರಿಂದ ರೈತಾಪಿ ವರ್ಗಕ್ಕೆ ಸ್ಪೂರ್ತಿ ದೊರೆತಂತಾಗುತ್ತದೆ. ಇದೇ ಫೆಬ್ರವರಿ 28ರಂದು “ಬಸವನಮಾಲೆ” ಎಂಬ ಬಸವಗಳ ಓಟ ಸ್ಪರ್ಧೆ ಇದ್ದು, ಇದರಲ್ಲಿ ವಿಜೇತವಾಗುವ “ಬಸವ”ಕ್ಕೆ ದೇವರ ಮಾಲೆ ಧರಿಸಿ ಶ್ರೀಶೈಲದಲ್ಲಿ ನಡೆಯುವ ಜಾತ್ರೆಗೆ ಕಳುಹಿಸಿಕೊಡುವ ಪರಿಪಾಠವಿದೆ ಎಂದರು.
ಧಾರ್ಮಿಕ ಆಚರಣೆ ಹಾಗೂ ನಂಬಿಕೆಗಳಿಗೆ ಗೌರವ ಕೊಡಬೇಕಿರುವುದು ನಮ್ಮ ಕರ್ತವ್ಯ
ಈಚೆಗಷ್ಟೇ ಪಂಚಲಿಂಗ ದರ್ಶನ ಮಹೋತ್ಸವವನ್ನು ಕೋವಿಡ್ ಆತಂಕದ ನಡುವೆಯೂ ನಿರ್ವಿಘ್ನವಾಗಿ ಭಕ್ತರ ಆಶಯಕ್ಕೆ ಧಕ್ಕೆ ಬರದಂತೆ ನೆರವೇರಿಸಿದ್ದೇವೆ. ಅದರ ಸಾರ್ಥಕ ಹಾಗೂ ಧನ್ಯಭಾವ ನನ್ನಲ್ಲಿ ಮೂಡಿದೆ. ಇಂತಹ ಒಂದು ಕ್ಷೇತ್ರದಲ್ಲಿ ಪುನಃ ಜಾತ್ರಾ ಮಹೋತ್ಸವ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಧಾರ್ಮಿಕ ಆಚರಣೆ ಹಾಗೂ ನಂಬಿಕೆಗಳಿಗೆ ಗೌರವ ಕೊಡಬೇಕಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕೋವಿಡ್ ಕುರಿತು ಜವಾಬ್ದಾರಿ ಅಗತ್ಯ
ಹಾಗಾಗಿ, ಆಚರಣೆಗಳು ಕೋವಿಡ್ ನಿಯಮಗಳಿಗೆ ಒಳಪಟ್ಟು ನಡೆಯುಂತಾಗಲಿ ಎಂಬುದು ನನ್ನ ಆಶಯವಾಗಿದೆ. ಕೋವಿಡ್ ಮಹಾಮಾರಿ ಬಗ್ಗೆ ಈಗ ನಾಗರಿಕರಿಗೂ ಅರಿವುಂಟಾಗಿದೆ. ಅವರೂ ಸಹ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಈ ಮೂಲಕ ನಮ್ಮ ನಾಡನ್ನು ಕೊರೋನಾ ಮುಕ್ತ ಮಾಡಲು ಸಹಕರಿಸಬೇಕು ಎಂದಿದ್ದಾರೆ.
ಇನ್ನು ಕೊನೆಯದಾಗಿ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವರು ನಾಡಿನ ಸಮಸ್ತ ಜನತೆಗೆ ಆಯುರಾರೋಗ್ಯವನ್ನು ಕರುಣಿಸಲಿ, ಕೊರೋನಾ ಮುಕ್ತವಾಗಲಿ, ಅನ್ನದಾತರಾದ ರೈತರಿಗೆ ಉತ್ತಮ ಮಳೆ-ಬೆಳೆ ಸಿಗುವಂತಾಗಲಿ, ನಾಡನ್ನು ಸುಭಿಕ್ಷವಾಗಿಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
key words : Mudukuthore-Sri Mallikarjuna Swamy-Temple-South India-Srisailam-Minister-S.T.Somashekhar