ಬೆಂಗಳೂರು, ಅಕ್ಟೋಬರ್, 29, 2022 (www.justkannada.in): ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬರೋಬ್ಬರಿ ರೂ.80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬಹುಮಹಡಿ ಕಾರ್ ಪಾರ್ಕಿಂಗ್ ಸೌಲಭ್ಯ ನಿರ್ಮಾಣವಾಗಿ ಒಂದು ವರ್ಷ ಕಳೆದರೂ, ಬಿಬಿಎಂಪಿಗೆ ಸೂಕ್ತ ನಿರ್ವಹಣಾ ಕಂಪನಿ ದೊರೆಯದೆ ಉಪಯೋಗವಾಗದೆ ಉಳಿದಿದೆ.
ಈ ಹಿಂದೆ ಹೊರಡಿಸಿದಂತಹ ಟೆಂಡರ್ ಗಳಿಗೆ ಸರಿಯಾದ ಪ್ರತಿಕ್ರಿಯೆ ಲಭಿಸದೇ ಇರುವ ಕಾರಣದಿಂದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದಾಯ ಹಂಚಿಕೆ ಮಾದರಿಯನ್ನು ಆಧರಿಸಿ ಹೊಸ ಟೆಂಡರ್ ಅನ್ನು ಆಹ್ವಾನಿಸಿದೆ.
ಈ ಸಂಬಂಧ ಮಾತನಾಡಿದ ಬಿಬಿಎಂಪಿಯ ಓರ್ವ ಹಿರಿಯ ಅಧಿಕಾರಿಯೊಬ್ಬರು, “ಪ್ರಾರಂಭದಲ್ಲಿ ನಾವು ಟೆಂಡರ್ ಪಡೆಯುವ ಕಂಪನಿ ಬಿಬಿಎಂಪಿಗೆ ರೂ.೪.೫ ಕೋಟಿ ನಿಗಧಿತ ಶುಲ್ಕ ಪಾವತಿಸಬೇಕೆಂದು ತಿಳಿಸಿದ್ದೆವು. ಈ ಮೊತ್ತವನ್ನು ಈ ಪ್ರದೇಶದ ಸುತ್ತಮುತ್ತಲಿನಲ್ಲಿರುವ ವಾಹನ ದಟ್ಟಣೆ ಹಾಗೂ ನಿಲುಗಡೆ ಶುಲ್ಕಗಳನ್ನು ಆಧರಿಸಿಯೇ ನಿರ್ಧರಿಸಲಾಗಿದ್ದರೂ ಸಹ ಬಿಡ್ಡರ್ ಗಳು ಮೊತ್ತವನ್ನು ಶೇ. ೫೦ರಷ್ಟು ಇಳಿಸುವಂತೆ ಕೋರಿದರು,” ಎಂದರು.
ಇಂತಹ ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಹೊಸದಾಗಿ ಆದಾಯ-ಹಂಚಿಕೆ ಮಾದರಿಯನ್ನು ಆಯ್ಕೆ ಮಾಡಿದ್ದು, ಇದರ ಪ್ರಕಾರ ಬಿಡ್ ಮಾಡುವ ಕಂಪನಿಯು ಈ ಸ್ಥಳದ ಕಾರ್ಯನಿರ್ವಹಣೆಯನ್ನು ಮಾಡಲಿದ್ದು, ಬರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸೇವಾ ಶುಲ್ಕವಾಗಿ ಉಳಿಸಿಕೊಂಡು, ಉಳಿದ ಮೊತ್ತವನ್ನು ಬಿಬಿಎಂಪಿ ಬಳಿ ಠೇವಣಿ ಮಾಡಬೇಕು. ಜೊತೆಗೆ ಬಿಬಿಎಂಪಿಯು ನಿರ್ವಹಣಾ ಅವಧಿಯನ್ನು ಮೊದಲಿದ್ದ ಮೂರು ವರ್ಷಗಳಿಂದ, ಐದು ವರ್ಷಗಳಿಗೆ ಹೆಚ್ಚಿಸಿದ್ದು, ಭದ್ರತಾ ಠೇವಣಿ ಮೊತ್ತವನ್ನು ತುಂಬಾ ಇಳಿಸಿದೆ.
ಈ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯವನ್ನು ೨೦೨೧ರ ಆಗಸ್ಟ್ ನಲ್ಲೇ, ಅಂದರೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿಯೇ ಆರಂಭಿಸಲು ಪ್ರಯತ್ನಿಸಲಾಯಿತು. ಬಿಬಿಎಂಪಿ ಆಗಿನಿಂದಲೂ ಈ ಸುತ್ತಲಿನ ಪ್ರದೇಶದಲ್ಲಿ ‘ನೋ ಪಾರ್ಕಿಂಗ್’ ಪ್ರದೇಶಗಳನ್ನಾಗಿ ಗುರುತಿಸುವುದು, ಪೇ ಅಂಡ್ ಪಾರ್ಕ್ ಅಡಿ ತರುವ ವ್ಯವಸ್ಥೆ ಮಾಡುವುದು, ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ ಬಿಬಿಎಂಪಿಯ ಯಾವುದೇ ಪ್ರಯತ್ನ ಈವರೆಗೂ ಫಲ ನೀಡಿಲ್ಲ.
ಒಂದು ವೇಳೆ ಈ ಬಾರಿಯೂ ಟೆಂಡರ್ ವಿಫಲವಾದರೆ, ಬಿಬಿಎಂಪಿ ಸ್ವಲ್ಪ ಸಮಯದವರೆಗೆ ಈ ಸೌಲಭ್ಯವನ್ನು ಉಚಿತವಾಗಿ ಒದಗಿಸಲು ಆಲೋಚಿಸುತ್ತಿದೆ. “ಈ ಬಾರಿ ಆದಾಯ ಹಂಚಿಕೆ ಮಾದರಿ ಉತ್ತಮ ಪ್ರತಿಕಿಯೆ ತರುತ್ತದೆ ಎಂದು ನಂಬಿದ್ದೇವೆ. ಒಂದು ವೇಳೆ, ಈಗಲೂ ಸಹ ಬಿಡ್ಡರ್ ಗಳು ಪ್ರತಿಕ್ರಿಯಿಸದಿದ್ದರೆ, ಬಿಬಿಎಂಪಿ ವತಿಯಿಂದ ಸ್ವತಃ ಮೂರು ತಿಂಗಳವರೆಗೆ ನಿರ್ವಹಣೆ ಮಾಡಿ, ಸಾರ್ವಜನಿಕರಿಗೆ ಉಚಿತವಾಗಿ ಸೌಲಭ್ಯ ಒದಗಿಸಿ, ಆ ಮೂಲಕ ಈ ಸೌಲಭ್ಯ ಎಷ್ಟು ಪರಿಣಾಮಕಾರಿಯಾಗಬಹುದು ಎಂದು ನೋಡಲು ಆಲೋಚಿಸಿದ್ದೇವೆ,” ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
೨೦೧೭ರಲ್ಲಿ ಈ ಯೋಜನೆ ಆರಂಭವಾಯಿತು. ಆದರೆ ಹಲವು ಬಾರಿ ಗಡುವು ಮೀರಿತು. ಅಂತಿಮವಾಗಿ ೨೦೨೧ರ ನವೆಂಬರ್ ನಲ್ಲಿ ಕಾಮಗಾರಿಗಳು ಪೂರ್ಣಗೊಂಡವು. ಇಲ್ಲಿ ಒಮ್ಮೆಗೆ ೫೫೬ ನಾಲ್ಕು ಚಕ್ರ ವಾಹನಗಳು ಹಾಗೂ ೪೪೫ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Multi-storey –car- parking- tender- invitation – BBMP