ಬೆಂಗಳೂರು:ಜುಲೈ-15: ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್ಪಿ) ಮೂರ್ನಾಲ್ಕು ಪಟ್ಟು ಅಧಿಕ ಬೆಲೆಗೆ ತಿಂಡಿ-ತಿನಿಸು, ಪಾನೀಯ, ಕುಡಿಯುವ ನೀರು ಮಾರಾಟ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಮಲ್ಟಿಪ್ಲೆಕ್ಸ್ ಗಳಿಗೆ ಮೂಗುದಾರ ಹಾಕಲು ಸರ್ಕಾರ ಕೊನೆಗೂ ಮುಂದಾಗಿದ್ದು, ಇನ್ಮುಂದೆ ಎಂಆರ್ಪಿ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡಬೇಕೆಂದು ಮಹತ್ವದ ಆದೇಶ ಹೊರಡಿಸಿದೆ. ಜು. 2ರಂದು ನಡೆದ ಶಾಸನ ರಚನಾ ಸಭೆಯಲ್ಲಿ ಸಮಿತಿಯೊಂದರ ಶಿಫಾರಸಿನ ಅನ್ವಯ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಮಲ್ಟಿಪ್ಲ್ಲೆಕ್ಸ್ ಚಿತ್ರಮಂದಿರಗಳು ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳನ್ನು ಎಂಆರ್ಪಿ ದರದಲ್ಲೇ ಮಾರಾಟ ಮಾಡುವ ನಿಯಮವನ್ನು ಜಾರಿಗೆ ತರುವಂತೆ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ 1964 ಸೆಕ್ಷನ್ 14ರ ಅನ್ವಯ ಚಿತ್ರಮಂದಿರ ಗಳ ಪರವಾನಗಿ ಪ್ರಾಧಿಕಾರಗಳಿಗೆ ಒಳಾಡಳಿತ ಇಲಾಖೆ ಆದೇಶಿಸಿದೆ.
ಪರವಾನಗಿಗೆ ಎಂಆರ್ಪಿ ಷರತ್ತು: ಬ್ರ್ಯಾಂಡೆಡ್ ಕಂಪನಿಗಳ ಕುಡಿಯುವ ನೀರು, ಬಿಸ್ಕತ್, ಚಿಪ್ಸ್, ಕೂಲ್ ಡ್ರಿಂಕ್ಸ್ಗೆ ಮಾರುಕಟ್ಟೆ ದರಕ್ಕಿಂತ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಇವು ಎಂಆರ್ಪಿ ದರದಲ್ಲೇ ಗ್ರಾಹಕರಿಗೆ ದೊರೆಯುವಂತಾಗಬೇಕು.
ಸ್ವಂತ ಬ್ರ್ಯಾಂಡ್ಗೂ ಏಕದರ
ಮಲ್ಟಿಪ್ಲೆಕ್ಸ್ಗಳು ಸೇರಿ ಚಿತ್ರಮಂದಿರಗಳಲ್ಲಿ ಅವರದೇ ಬ್ರ್ಯಾಂಡ್ನ ತಿಂಡಿ-ತಿನಿಸು, ತಂಪು ಪಾನೀಯ ಹಾಗೂ ನೀರಿನ ಬಾಟಲಿಗಳ ಮಾರಾಟಕ್ಕೆ ಮನಸ್ಸಿಗೆ ಬಂದಷ್ಟು ದರ ವಿಧಿಸಿ ಗ್ರಾಹಕರಿಂದ ಸುಲಿಗೆ ಮಾಡಲಾಗುತ್ತಿದೆ. ಇನ್ನುಮುಂದೆ ಸ್ವಂತ ಬ್ರ್ಯಾಂಡ್ನ ಪದಾರ್ಥಗಳಿಗೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಗಳಿಗೆ ಸಮಾನಾಂತರವಾಗಿ ಏಕರೀತಿಯ ದರವನ್ನು ನಿಗದಿಪಡಿಸಿ ಮಾರಾಟ ಮಾಡಬೇಕು ಎಂದು ನಿರ್ದೇಶಿಸಿದೆ.
ಬಿಲ್ ಕೊಡದಿರುವುದು, ಜಿಎಸ್ಟಿ ನಿಯಮ ಪಾಲಿಸದವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಎಂಆರ್ಪಿ ದರದಲ್ಲೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕೆಂಬ ಸರ್ಕಾರದ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇತರೆ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸಹಕಾರ ಕೊಡಲಾಗುತ್ತದೆ.
| ನಿತೇಶ್ ಪಾಟೀಲ್ ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಎಂಆರ್ಪಿ ದರಕ್ಕಿಂತ ಅಧಿಕ ಹಣ ವಸೂಲಿ ಮಾಡುವವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗುತ್ತಿದೆ. 2 ವರ್ಷದಲ್ಲಿ 42 ಪ್ರಕರಣ ದಾಖಲಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ದಂಡ ವಿಧಿಸಿ, ಮತ್ತೆ ಕೆಲ ಪ್ರಕರಣಗಳಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈಗ ಸರ್ಕಾರದ ಹೊಸ ಆದೇಶದಂತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ.
| ರಾಮಯ್ಯ ಡೆಪ್ಯುಟಿ ಕಂಟ್ರೋಲರ್, ಕಾನೂನು ಮಾಪನ ಶಾಸ್ತ್ರ ಇಲಾಖೆ
ಕೃಪೆ:ವಿಜಯವಾಣಿ