ಮುಂಬೈ:ಜುಲೈ-29:(www.justkannada.in) ತನ್ನ 32ನೇ ವರ್ಷ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಉದ್ಯಾನವನವೊಂದರಲ್ಲಿ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನ ಗೆಳೆಯರೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ನಿವಾಸಿ ನಿತೇಶ್ ಸಾವಂತ್ ಮೃತ ವ್ಯಕ್ತಿ. ಮುಂಬೈನ ಘಾಟ್ಕೋಪರ್ ಬಡಾವಣೆಯ ನಿವಾಸಿಯಾಗಿದ್ದ ನಿತೇಶ್, ಭಾನುವಾರ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಈ ಹಿನ್ನಲೆಯಲ್ಲಿ ಘಾಟ್ಕೋಪರ್ನ ಪಂತ್ ನಗರದಲ್ಲಿರುವ ಉದ್ಯಾನವೊಂದರಲ್ಲಿ ಪಾರ್ಟಿ ಆಯೋಜಿಸಿದ್ದ. ತನ್ನ ಸ್ನೇಹಿತರನ್ನೂ ಆಹ್ವಾನಿಸಿದ್ದ.
ಪಾರ್ಟಿಗೆ ಬಂದ ಸ್ನೇಹಿತರು ಚೆನ್ನಾಗಿಯೇ ಮಾತನಾಡುತ್ತಾ, ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಈ ಹಿಂದೊಮ್ಮೆ ನಡೆದ ಜಗಳದ ಬಗ್ಗೆ ಪ್ರಸ್ತಾಪವಾಗಿದೆ. ಈ ಜಗಳಕ್ಕೆ ನಿತೇಶ್ ಸಾವಂತ್ ಕಾರಣ ಎಂದು ನಿರ್ಧರಿಸಿ ಆತನನ್ನು ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ. ತಕ್ಷಣ ಆತನನ್ನು ಹಲವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಿತೇಶ್ ಅಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಾಟ್ಕೋಪರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.