ಮೈಸೂರು,ಡಿಸೆಂಬರ್,14,2024 (www.justkannada.in): ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರನ್ನ ಹತ್ಯೆ ಮಾಡಿದ ಆರೋಪದ ಮೇಲೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ.10,000 ರೂ. ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಯೋಗೇಶ್ ಎಂಬಾತನೇ ಕಠಿಣ ಜೀವಾವಧಿ ಶಿಕ್ಷೆಗೆ ಗುರಿಯಾದವನು. ಟಿ.ಮಂಜುನಾಥ ಮತ್ತು ಆರ್.ಮಂಜುನಾಥ ಹತ್ಯೆಗೀಡಾದವರು.
ಪ್ರಕರಣದ ಹಿನ್ನೆಲೆ
ದಿ:24-05-2024 ರಂದು ಆರೋಪಿ ಯೋಗೇಶ್ ನು ಕೆಎ-09, ಡಿ-4567 ಪ್ಯಾಸೆಂಜರ್ ಆಟೋವನ್ನು ಹೆಚ್.ಡಿ.ಕೋಟೆ ರಸ್ತೆಯ ಕೋಟೆಹುಂಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ದಿ:24-05-2020 ರಂದು ಚಾಲನೆ ಮಾಡುತ್ತಿದ್ದ ವೇಳೆ ಯಾವುದೇ ಸಿಗ್ನಲ್ ನೀಡದೇ ತನ್ನ ಆಟೋವನ್ನು ಸಡನ್ನಾಗಿ ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಮಂಜುನಾಥ ಅವರು ಚಾಲನೆ ಮಾಡುತ್ತಿದ್ದ ಕೆಎ-09 ಸಿ-9552 ಮಹೀಂದ್ರ ಗೂಡ್ಸ್ ವಾಹನದ ಮುಂಭಾಗ ಜಖಂ ಆಗಿದೆ. ಈ ವಿಚಾರದಲ್ಲಿ ಗೂಡ್ಸ್ ವಾಹನದಲ್ಲಿದ್ದ ಟಿ.ಮಂಜುನಾಥ ಮತ್ತು ಆರ್.ಮಂಜುನಾಥ ಅವರು ಪ್ಯಾಸೆಂಜರ್ ಆಟೋ ಚಾಲಕ ಯೋಗೇಶನಿಗೆ ನಮ್ಮ ಗಾಡಿ ಡ್ಯಾಮೇಜ್ ಆಗಿದೆ ರಿಪೇರಿ ಮಾಡಿಸಿಕೊಡು ಎಂದು ಕೇಳಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಜಗಳವಾಗುತ್ತಿದ್ದಾಗ, ಯೋಗೇಶನ ತಾಯಿ ನನ್ನ ಮಗನ ಜೊತೆ ಏಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ಈ ವೇಳೆ ಯೋಗೇಶ್ ಒಂದು ಚಾಕು ತೆಗೆದು ಕೊಲೆ ಮಾಡುವ ಉದ್ದೇಶದಿಂದ ಆರ್.ಮಂಜುನಾಥ ಅವರ ಎದೆಯ ಎಡಭಾಗಕ್ಕೆ, ಮತ್ತು ಅದೇ ಚಾಕುವಿನಿಂದ ಟಿ.ಮಂಜುನಾಥನ ಹೊಟ್ಟೆಗೆ ಚುಚ್ಚಿ ಹಲ್ಲೆ ಮಾಡಿದ್ದಾನೆ. ಇದರಿಂದ ಇಬ್ಬರು ಮೃತಪಟ್ಟಿದ್ದು ತನಿಖೆಯಿಂದ ದೃಢಪಟ್ಟಿದೆ. ಆರೋಪಿ ಯೋಗೇಶನ ವಿರುದ್ಧ ಜಯಪುರ ಠಾಣೆ ನಿರೀಕ್ಷಕ ಕೆ.ಜೀವನ್ ಅವರು ಪ್ರಕರಣ ದಾಖಲಿಸಿ ತನಿಖೆ ಮಾಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಅವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿತರು ಅಪರಾಧ ಎಸಗಿರುವುದು ಸಾಬೀತಾಗಿದ್ದರಿಂದ ಆರೋಪಿತರಿಗೆ ಕಲಂ 504 ಐಪಿಸಿ ಅಡಿಯ ಅಪರಾಧಕ್ಕೆ 1 ವರ್ಷ ಕಠಿಣ ಶಿಕ್ಷೆ ಮತ್ತು ರೂ.1,000/- ದಂಡವನ್ನು, ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ.10,000/- ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ.ಈ.ಯೋಗೇಶ್ವರ ಅವರು ಸರ್ಕಾರದ ಪರ ವಾದ ಮಂಡಿಸಿದರು.
Key words: Murder case, Accused, life sentence, mysore court