ಮೈಸೂರು,ಆಗಸ್ಟ್,7,2024 (www.justkannada.in): ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯನ್ನ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಮೈಸೂರಿನ(ಹುಣಸೂರಿನಲ್ಲಿರುವ) 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಆದೇಶ ಹೊರಡಿಸಿದೆ.
ಸರಗೂರು ತಾಲ್ಲೂಕು ಅಂತರಸಂತೆ ಗ್ರಾಮದ ಸುನೀಲ್ ಕೊಲೆಯಾದ ವ್ಯಕ್ತಿ. ರವಿ ಬಿನ್ ಲೇಟ್ ಗೋಪಾಲ್ ಶೆಟ್ಟಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.
ಪ್ರಕರಣದ ಹಿನ್ನೆಲೆ
ಅಂತರಸಂತೆ ಗ್ರಾಮದ ಮೃತ ಸುನೀಲ್ ಎಂಬಾತ ಆರೋಪಿಯಾದ ರವಿಯ ಹೆಂಡತಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡ. ಇದರಿಂದ ಕೋಪಗೊಂಡಿದ್ದ ರವಿ 8-2-2020ರಂದು ಸುಮಾರು ಸಂಜೆ 7.50ರ ಸಮಯದಲ್ಲಿ ಅಂತರಸಂತೆ ಗ್ರಾಮದ ಪ್ರದೀಪ್ ಕುಮಾರ್ ಎನ್ನುವವರ ವೆಂಕಟೇಶ್ವರ ಬೇಕರಿ ಮುಂಭಾಗ ಸುನೀಲ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದನು. ಹಲ್ಲೆಗೊಳಗಾದ ಸುನೀಲ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದನು.
ಈ ಬಗ್ಗೆ ಸುನೀಲ್ ಸಹೋದರ ನೀಡಿದ ದೂರಿನ ಮೇರೆಗೆ ಅಂದಿನ ಹೆಚ್.ಡಿ.ಕೋಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಪುಟ್ಟಸ್ವಾಮಿ ಅವರು ತನಿಖೆ ಕೈಗೊಂಡು ಆರೋಪಿ ರವಿ ಎಂಬುವವನ ವಿರುದ್ಧ ಭಾ.ದಂ.ಸಂ. ಕಲಂ 302 ರಡಿಯಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಇದೀಗ ಮೈಸೂರಿನ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೀಠಾಸೀನ ಹುಣಸೂರು) ನ್ಯಾಯಾಧೀಶರಾದ.ಟಿ.ಗೋವಿಂದಯ್ಯ ಅವರು ವಿಚಾರಣೆ ನಡೆಸಿ, ಆರೋಪಿ ರವಿ ತಪ್ಪಿತಸ್ಥನೆಂದು ಜೀವಾವಧಿ ಶಿಕ್ಷೆ ಮತ್ತು ರೂ.30,000/- ಸಾವಿರ ರೂ ದಂಡ ವಿಧಿಸಿ ನೀಡಿ ತೀರ್ಪು ನೀಡಿದ್ದಾರೆ. ಮೃತ ಸುನೀಲನ ತಾಯಿಗೆ ಪರಿಹಾರವಾಗಿ ರೂ.3,00,000/- ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾನ್ಯ ನ್ಯಾಯಾಧೀಶರು ಶಿಫಾರಸ್ಸು ಮಾಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ಅವರು ವಾದ ಮಂಡಿಸಿದ್ದರು.
Key words: murder, man, sentenced, life imprisonment, mysore court