ಮೈಸೂರು, ಜ.೦೨, ೨೦೨೫ : ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ ಎಂದು ನಟಿ ರಂಜನಿ ರಾಘವ್ ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಂಜನಿ ಹೇಳಿರುವುದಿಷ್ಟು…
ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ, ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ.
ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. ೧೦೦೦ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ.
ಸೆಪ್ಟೆಂಬರ್ ಹದಿಮೂರು ೨೦೨೩ ರಂದು ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ “ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು” ಅಂತಷ್ಟೇ ಅಂದುಕೊಂಡಿದ್ದು! “ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ” ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ “ಒನ್ ಕಾಲ್ ಅವೇ” ಅನ್ನೋ ಜಂಭ ಹುಟ್ಟಿಸಿದ್ದಾರೆ.
ಹೋದ ವರ್ಷ ೨೦೨೪ ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು ೨೦೨೫ ಬರಬೇಕಾಯಿತು! ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ.
ನಿಮ್ಮೆಲ್ಲರಿಗೂ ರಾಶಿ ಪ್ರೀತಿ…
key words: Kannada, Kolluru Mookambike, Music director Ilayaraja.
“Tell me the story in Kannada, I understand Kannada well, Kollur Mookambike is my mother “- Music director Ilayaraja.