ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಂ ಸದಸ್ಯನ ನೇಮಕ ವಿಚಾರ:  ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು.

ಬೆಂಗಳೂರು,ಮೇ,8,2024 (www.justkannada.in): ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳೀರಿ? ನಿಮ್ಮ  ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ? ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಎದೆಬಡಿದುಕೊಳ್ಳೀರಲ್ಲಾ? ನಿಮ್ಮದೇ ಪಕ್ಷದ ಸರ್ಕಾರ 2020 ಮತ್ತು 2022ರ ಸಾಲಿನಲ್ಲಿ ಇದೇ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದಾಗ ನಿಮ್ಮಲ್ಲಿ ಈಗ ಉಕ್ಕಿ ಹರಿಯುತ್ತಿರುವ ಹಿಂದುತ್ವದ ಅಭಿಮಾನ ಆಗ ಎಲ್ಲಿ ಅಡಗಿ ಕೂತಿತ್ತು? ಎಂದು ಟಾಂಗ್ ನೀಡಿದ್ದಾರೆ.

ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ.  ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ-ಗೌರವದಿಂದ ಭಾಗವಹಿಸುತ್ತಾರೆ. 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಇಮ್ತಿಯಾಜ್ ಪಾಷಾ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. 2022ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಸಮಿತಿಗೆ ಅಪ್ಸರ್ ಅವರನ್ನು ಸದಸ್ಯರನ್ನಾಗಿ ಮಾಡಿತ್ತು.

ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಂಪತ್ತು ಲೂಟಿ ಮಾಡುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಆರೋಪಿಸುವಷ್ಟು ಕೀಳು ಮಟ್ಟಕ್ಕೆ ನಾನಿಳಿಯಲಾರೆ. ಎಲ್ಲವನ್ನೂ ಕೇಸರಿ ಕಣ್ಣುಗಳಿಂದ ನೋಡುವ ರೋಗದಿಂದ ಶೀಘ್ರ ಗುಣಮುಖರಾಗಿ ಎಂದು ನಿಮಗೂ ನಿಮ್ಮ ಸರ್ವೋಚ್ಚ ನಾಯಕರಾದ ನರೇಂದ್ರ ಮೋದಿ ಅವರಿಗೆ ಹಾರೈಸುತ್ತೇನೆ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ರಾಜ್ಯದ ಬಿಜೆಪಿ ನಾಯಕರೇ, ನಿಮಗೆ ಮಾನ-ಮರ್ಯಾದೆ ಎನ್ನುವುದೇನಾದರೂ ಇದ್ದರೆ ಮೊದಲು ಜನರನ್ನು ತಪ್ಪುದಾರಿಗೆಳೆಯುವ ಈ ಹೇಳಿಕೆಯನ್ನು ವಾಪಸು ಪಡೆದು ರಾಜ್ಯದ ಜಾತ್ಯತೀತ ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ  ತಿಳಿಸಿದ್ದಾರೆ.

Key words: Muslim, member, Brahmotsav Committee, Siddaramaiah