ಪ್ರಗತಿಪರ ಚಿಂತಕ ಮುಜಾಫರ್ ಅಸ್ಸಾದಿ ನಿಧನ: ಸಿಎಂ ಸೇರಿ ಗಣ್ಯರಿಂದ ಸಂತಾಪ

ಮೈಸೂರು,ಜನವರಿ,4,2024 (www.justkannada.in):  ಮೈಸೂರು ವಿ.ವಿ ವಿಶ್ರಾಂತ ಹಂಗಾಮಿ ಕುಲಪತಿ ಹಾಗೂ ಪ್ರಗತಿಪರ ಚಿಂತಕ  ಮುಜಾಫರ್ ಅಸ್ಸಾದಿ(63) ನಿಧನರಾಗಿದ್ದು ಸಿಎಂ ಸಿದ್ದರಾಮಯ್ಯ  ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ  ಮುಜಾಫರ್ ಅಸ್ಸಾದಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ನಿಧನರಾಗಿದ್ದಾರೆ. ಮೈಸೂರು ಸರಸ್ವತಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು 3 ರಿಂದ 5 ಗಂಟೆ ವರಗೆ ಮುಸ್ಲಿಂ ಹಾಸ್ಟೆಲ್ ಬಳಿ ಸಾರ್ವಜನಿಕ್ಕೆ ಅವಕಾಶ ನೀಡಲಾಗಿದೆ. ನಂತರ ನಗರದ ಟಿಪ್ಪು ಸರ್ಕಲ್ ಬಳಿ ಇರುವ  ಮುಸ್ಲಿಂ ಬರಿಯಲ್ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಮೈಸೂರು ವಿ.ವಿ ಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಲಾ ವಿಭಾಗದ ಡೀನ್ ಮತ್ತು ಪ್ರಭಾರ ಕುಲಪತಿಗಳಾಗಿ ಮುಜಾಫರ್ ಅಸ್ಸಾದಿ ಸೇವೆ ಸಲ್ಲಿಸಿದ್ದರು.

ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು ಅಸ್ಸಾದಿ- ಸಿಎಂ ಸಿದ್ದರಾಮಯ್ಯ ಸಂತಾಪ

ಮುಜಾಫರ್ ಅಸ್ಸಾದಿ ಅವರ ನಿಧನಕ್ಕೆ ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.

ಪ್ರೊ.ಅಸ್ಸಾದಿ ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ.

ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್‌ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದ ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರ.  ವರ್ಷಗಳಿಂದ ನನ್ನ ಹಿತೈಷಿಯಾಗಿ ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ. ಪ್ರೊ.ಅಸ್ಸಾದಿ ಅವರನ್ನು ಕಳೆದುಕೊಂಡ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಅವರು ಕೂಡ ಮುಜಾಫರ್ ಅಸ್ಸಾದಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಅಸ್ಸಾದಿ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಕೆಪಿಸಿಸಿ ವಕ್ತಾರ  ಹೆಚ್.ಎ ವೆಂಕಟೇಶ್,  ಪ್ರೊ. ಮುಜಾಫರ್ ಅಸಾದಿ ಅವರು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಾಡಿನ ಚಿಂತಕರಾಗಿ, ಅತ್ಯುತ್ತಮ ಸಂಶೋಧಕರಾಗಿ,  ಮೈಸೂರು ವಿಶ್ವವಿದ್ಯಾನಿಲಯದ ನಿಲಯದ ಅಂಗಾಮಿ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ . ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ರ ನೀಡಿ ಅನುಕರಣೆಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಪ್ರಸ್ತುತ ಪ್ರಸ್ತುತ ರಾಜಕಾರಣವನ್ನು ವಿಮರ್ಶಿಸಿ  ಬರಹದ  ಮೂಲಕ ಚಿರಪರಿಚಿತರಾಗಿದ್ದರು. ರಾಜಕೀಯ ಮತ್ತು ಸಾಮಾಜಿಕವಾಗಿ ತಮ್ಮ ಭಾಷಣದ ಮೂಲಕ ಹೊಸ ಆಲೋಚನೆ ಮೂಡಿಸುತ್ತಿದ್ದರು. ಶ್ರೀಯುತರ ನಿಧನವು ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗುವುದರ ಜೊತೆಗೆ ಪ್ರಗತಿಪರ ಆಲೋಚನೆ ಉಳ್ಳ ವ್ಯಕ್ತಿ ಒಬ್ಬರನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

Key words: thinker, Muzaffar Assadi, passes away