ಮೈಸೂರು,ಏಪ್ರಿಲ್,19,2023(www.justkannada.in): ಇದು ನನ್ನ ಕೊನೆಯ ಚುನಾವಣೆ. ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ನೀವು ನನ್ನನ್ನು ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಡಿ ಎಂದು ವರುಣಾ ಕ್ಷೇತ್ರದ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ನಂಜನಗೂಡಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮ ಉತ್ಸವ ನೋಡಿದರೆ ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ.ಇದು ನನ್ನ ಕೊನೆಯ ಚುನಾವಣೆ. ಮುಂದೆ ಡಾ.ಯತೀಂದ್ರ ಇದ್ದಾನೆ, ಧವನ್ ಇದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಬಯಸಿ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಯವರು ವರುಣ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರಿಗೆ ಅವಕಾಶ ನೀಡಿಲ್ಲ. ಬೆಂಗಳೂರಿನಿಂದ ಸೋಮಣ್ಣ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ- ಜೆಡಿಎಸ್ ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಜೆಡಿಎಸ್ ನವರು ಡಾ.ಭಾರತಿ ಶಂಕರ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಸೋಲಿಸಿ ದೊಡ್ಡ ಅಂತರದಲ್ಲಿ ನೀವು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ಇದೆ ಎಂದರು.
ಬಿಜೆಪಿಯವರು ಕುತಂತ್ರ ಮಾಡುವುದರಲ್ಲಿ ನಿಸ್ಸೀಮರು. ಬಿಜೆಪಿ, ಜೆಡಿಎಸ್ ನವರು ನನ್ನನ್ನು ಸೋಲಿಸಲೇಬೇಕು ಅಂತ ಹಣ ಹೊಳೆ ಹರಿಸಬಹುದು. ಎಷ್ಟೇ ಕೋಟಿ ಖರ್ಚು ಮಾಡಲಿ, ಎಷ್ಟೇ ಕುತಂತ್ರ, ಹುನ್ನಾರ ಮಾಡಲಿ. ವರುಣ ಕ್ಷೇತ್ರದ ಜನ ಇದ್ಯಾವುದಕ್ಕೂ ಸೊಪ್ಪು ಹಾಕಲ್ಲ. ನನಗೆ ಆಶೀರ್ವಾದ ಮಾಡೇ ಮಾಡುತ್ತಾರೆ. ಬಿಜೆಪಿಯವರಿಗೆ ಭಯ. ಇಡೀ ರಾಜ್ಯದ ಜನ ಸಿದ್ದರಾಮಯ್ಯ ಅವರಿಗೆ ಪ್ರೀತಿ ತೋರಿಸುತ್ತಿದ್ದಾರೆ. ಆದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಬೇಕು ಅಂತ ತೀರ್ಮಾನಿಸಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.
ವರುಣ ನಾನು ಹುಟ್ಟಿದ ಹೋಬಳಿ. ನಮ್ಮೂರು ಸಿದ್ದರಾಮನಹುಂಡಿ ಇಲ್ಲೇ ಇದೆ. ಇದು ನನ್ನ ಕೊನೆಯ ಚುನಾವಣೆ. ರಾಜ್ಯದಲ್ಲಿ ಶೇ.40ರಷ್ಟು ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಬಿಜೆಪಿಯನ್ನು ಸೋಲಿಸಲೇಬೇಕು. ಜೆಡಿಎಸ್ ನವರಿಗೆ ಅತಂತ್ರ ಸರ್ಕಾರ ಬರಬೇಕು. ನನಗೆ ಸ್ಪಷ್ಟ ಮಾಹಿತಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸೂರ್ಯೋದಯದಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ ಇಲ್ಲಿಗೆ ಬಂದು ಹೋಗಿದ್ದಾರೆ. ವರುಣ ತಾಲೂಕು ಮಾಡುವುದಾಗಿ ಹೇಳಿದ್ದಾರೆ. ನಾಲ್ಕು ವರ್ಷ ನೀವೇ ಅಧಿಕಾರದಲ್ಲಿದ್ದಿರಿ.ಆಗ ಯಾಕೆ ಮಾಡಲಿಲ್ಲ ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
Key words: my –last- election-Win – Siddaramaiah – Varuna Constituency.