ಮೈಸೂರು, ಫೆಬ್ರವರಿ 09, 2023 (www.justkannada.in): ವಿಧಾನ ಸಭೆ ಚುನಾವಣೆಗೆ ರಾಜ್ಯದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದರೆ, ಮೈಸೂರಿನಲ್ಲಿರುವ ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆ (ಮೈಲ್ಯಾಕ್)ನಲ್ಲಿಯೂ ಅಳಿಸಲಾಗದ ಶಾಹಿ ತಯಾರಿಕೆ ನಡೆದಿದೆ.
ಚುನಾವಣೆಯಲ್ಲಿ ಬಳಸುವ ಅಳಿಸಲಾಗದ ಶಾಹಿ ತಯಾರಿಸುವ ಏಕೈಕ ಸಂಸ್ಥೆಯಾದ ಮೈಲ್ಯಾಕ್ ನಲ್ಲಿಯೂ ಚಟುವಟಿಕೆ ಜೋರಾಗಿದೆ. ಚುನಾವಣೆಗಾಗಿ 1.30 ಲಕ್ಷ ಬಾಟೆಲ್ ಅಳಿಸಲಾಗದ ಶಾಯಿ ತಯಾರಿಕೆಗೆ ಚುನಾವಣೆ ಆಯೋಗ ಮೈಲ್ಯಾಕ್ ಗೆ ಸೂಚನೆ ನೀಡಿದೆ.
ಇದರ ಜತೆಗೆ ಮತ ಯಂತ್ರಗಳ ಪ್ಯಾಕಿಂಗ್ ಗೆ ಬಳಸುವ ಅರಗು ತಯಾರಿಕೆಗೂ ನಿರ್ದೇಶನ ಬಂದಿದೆ. 3.90 ಲಕ್ಷ ಅರಗು ಸ್ಟಿಕ್ ತಯಾರಿಕೆಗೂ ಚುನಾವಣಾ ಆಯೋಗದ ಅಧಿಕಾರಿಗಳು ಮೈಲ್ಯಾಕ್ ಗೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಶಾಯಿ ಹಾಗೂ ಅರಗು ತಯಾರಿಕಾ ಕಾರ್ಯದಲ್ಲಿ ಮೈಲ್ಯಾಕ್ ಸಿಬ್ಬಂದಿ ನಿರತರಾಗಿದ್ದಾರೆ ಎಂದು ‘ಜಸ್ಟ್ ಕನ್ನಡ’ಕ್ಕೆ ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು ಅವರು ಮಾಹಿತಿ ನೀಡಿದ್ದಾರೆ.
ಪ್ರಪಂಚದ ಬಹುತೇಕ ದೇಶಗಳಿಗೆ ಮತದಾನದ ಸಂದರ್ಭದಲ್ಲಿ ಅಳಿಸಲಾಗದ ಶಾಯಿ ಪೂರೈಸುವ ಏಕೈಕ ಸಂಸ್ಥೆ ಮೈಸೂರಿನಲ್ಲಿರುವ ಮೈಲ್ಯಾಕ್. ಚುನಾವಣೆಗೆ ದಿನಾಂಕ ನಿಗದಿಯಾದ ಬಳಿಕ ಚುನಾವಣಾ ಆಯೋಗ ಅಗತ್ಯ ಶಾಯಿ ಹಾಗೂ ಅರಗು ತಯಾರಿಕೆಗೆ ಸೂಚನೆ ನೀಡುತ್ತದೆ.
ಸೂಚನೆ ಪ್ರಕಾರ ಮೈಲ್ಯಾಕ್ ಅಧಿಕಾರಿಗಳು ಶಾಯಿ ತಯಾರಿಸಿ ಸಂಬಂಧಪಟ್ಟ ರಾಜ್ಯ ಹಾಗೂ ದೇಶಗಳಿಗೆ ರವಾನೆ ಮಾಡುತ್ತಾರೆ. ಇದೀಗ ಚುನಾವಣಾ ಆಯೋಗದಿಂದ ಈ ನಿರ್ದೇಶನ ಮೈಲ್ಯಾಕ್ ಗೆ ಬಂದಿರುವುದು ರಾಜ್ಯ ವಿಧಾನ ಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಮುನ್ಸೂಚನೆಯಾಗಿದೆ.