ಮೈಸೂರು, ನವೆಂಬರ್,4,2020(www.justkannada.in): ಸಹಕಾರ ಕ್ಷೇತ್ರದಲ್ಲಿ ಅತಿ ಪ್ರತಿಷ್ಠಿತ, ರಾಜಕೀಯ ಪ್ರಭಾವ ಹೊಂದಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಆಡಳಿತಾವಧಿಯು ಅಂತ್ಯಗೊಂಡಿದ್ದು, ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಡಿಸೆಂಬರ್ ಅಂತ್ಯಕ್ಕೆ ಚುನಾವಣೆ ನಡೆಯುವ ಸಂಭವವಿದೆ.
ಮೈಮುಲ್ ನ ಐದು ವರ್ಷದ ಅವಧಿಯು ಸೆ.14ಕ್ಕೆ ಮುಗಿದಿದ್ದು, ಚುನಾವಣೆ ನಡೆಸುವ ತನಕ ಸದ್ದಿಲ್ಲದೆ ಸಹಕಾರ ಸಂಘಗಳ ಜಂಟಿ ನಿಬಂಧಕ ಆರ್.ಪ್ರಕಾಶ್ ರಾವ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ರಾಜ್ಯಸರ್ಕಾರವು ನೇಮಿಸಿದೆ. ಸಹಕಾರ ಕ್ಷೇತ್ರ ಹುಟ್ಟಲು ಪ್ರಮುಖ ಕಾರಣಕರ್ತರಾದ ಕರ್ನಾಟಕದಲ್ಲಿ ಪಕ್ಷಾತೀತವಾಗಿ ನಿರ್ದೇಶಕರು ಆಯ್ಕೆಯಾಗಿ ಅಧ್ಯಕ್ಷರು-ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದರು.ಆದರೆ, ವರ್ಷದಿಂದ ವರ್ಷಕ್ಕೆ ಆಯಾಯ ಪಕ್ಷಗಳು ಸಹಕಾರ ಸಂಘಗಳನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳಲು ಮುಂದಾಗಿದ್ದರಿಂದಾಗಿ ಈಗ ಅನೇಕರು ಈ ಹುದ್ದೆಗಳ ಮೇಲೆ ಕಣ್ಣಿಟ್ಟು ಆಯ್ಕೆಯಾಗುತ್ತಿದ್ದಾರೆ. ಇದರಿಂದಾಗಿ ಸಹಕಾರ ಕ್ಷೇತ್ರಗಳ ಚುನಾವಣೆಯು ಸಾರ್ವತ್ರಿಕ ಚುನಾವಣೆಯಂತೆ ರಂಗುಪಡೆದುಕೊಳ್ಳುತ್ತಿರುವುದರಿಂದ ಶಾಸಕರು, ಸಹಕಾರ ಕ್ಷೇತ್ರದ ಧುರೀಣರು ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸುವ ಕೆಲಸ ಮಾಡುತ್ತಿರುವುದರಿಂದ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.
ಕಳೆದ 2015ರಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಒಂಬತ್ತು ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಎಸ್.ಸಿದ್ದೇಗೌಡ, ಕೆ.ಜಿ.ಮಹೇಶ್, ಎ.ಟಿ.ಸೋಮಶೇಖರ್, ಕೆ.ಎಸ್.ಕುಮಾರ್, ಕೆ.ಈರೇಗೌಡ, ದ್ರಾಕ್ಷಾಯಿಣಿ,ಲೀಲಾ, ಪಿ.ಎಂ.ಪ್ರಸನ್ನ, ಕೆ.ಸಿ.ಬಲರಾಮ್ ಆಯ್ಕೆಯಾಗಿದ್ದು, ಬಹುತೇಕರು ಮಾಜಿ ಸಚಿವ ಜಿ.ಟಿ.ದೇವೇಗೌಡರ ಬೆಂಬಲಿಗರಾಗಿದ್ದರು. ಇದೀಗ ಈ ಎಲ್ಲಾ ನಿರ್ದೇಶಕರ ಅವಧಿಯು ಸೆ.14ರಂದು ಮುಗಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.
ಶೀಘ್ರದಲ್ಲೇ ಚುನಾವಣಾ ದಿನಾಂಕ:
ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆಗಳನ್ನು ಮುಂದೂಡುವಂತೆ ಹೇಳಿದ್ದ ರಾಜ್ಯಸರ್ಕಾರ ಈಗ ಹಲವು ನಿರ್ಬಂಧ ವಿಧಿಸಿ ಚುನಾವಣೆ ನಡೆಸಲು ಒಪ್ಪಿಗೆ ಕೊಟ್ಟಿರುವುದರಿಂದ ಶೀಘ್ರದಲ್ಲೇ ಚುನಾವಣಾ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ಸಹಕಾರ ಸಂಘಗಳ ಚುನಾವಣಾ ಪರಿಷತ್ ಮೈಮುಲ್ ಚುನಾವಣೆ ನಡೆಸುವ ಹೊಣೆ ಹೊತ್ತಿದ್ದು, ಎಲ್ಲವು ಅಂದುಕೊಂಡಂತೆ ನಡೆದರೆ ಹೊಸ ವರ್ಷದ ಹೊತ್ತಿಗೆ ನೂತನ ಆಡಳಿತ ಮಂಡಳಿ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಮೈಮುಲ್ ಮೂಲಗಳು ಹೇಳಿವೆ. ಈಗಾಗಲೇ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ಭರಾಟೆ ಜೋರಾಗಿರುವ ಜತೆಗೆ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಬಾಲಚಂದ್ರಜಾರಕಿಹೊಳಿ,ಉಮೇಶ್ ಕತ್ತಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ತಮ್ಮ ಎಲ್ಲ ಮುನಿಸು ಆಡಳಿತ ಮಂಡಳಿಯನ್ನು ಬಿಜೆಪಿ ಪಾಲಿಗೆ ತೆಗೆದುಕೊಳ್ಳಲು ಯತ್ನಿಸಿರುವುದರಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಮೈಮುಲ್ ಚುನಾವಣೆಯು ಸಾಕಷ್ಟು ಗಮನ ಸೆಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಮುಲ್ ನತ್ತ ಜಿಟಿಡಿ ಬೆಂಬಲಿಗರ ಕಣ್ಣು:
ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಬಲ್ಯಹೊಂದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡರು ಮೈಮುಲ್ ನಲ್ಲೂ ತಮ್ಮದೇ ಅಧಿಪತ್ಯ ಸಾಧಿಸಲು ಮುಂದಾಗಿದ್ದಾರೆ. ಯಾವುದೇ ಪಕ್ಷದಲ್ಲಿದ್ದರೂ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಗೆಲುವಿನ ನಗೆ ಬೀರುವ ಜಿ.ಟಿ.ದೇವೇಗೌಡರು ಈ ಬಾರಿ ಏಕವ್ಯಕ್ತಿಯಾಗಿ ತಮ್ಮವರನ್ನು ಗೆಲ್ಲಿಸಲು ಮುಂದಾಗಬೇಕಾಗಿದೆ. ಮೈಸೂರು ಜಿಲ್ಲಾ ಸಹಕಾರ ಯೂನಿನ್, ಮೈಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿರುವ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ಗೌಡರು ಈಗ ಮೈಮುಲ್ನತ್ತ ಕಣ್ಣು ಬೀರಿದ್ದಾರೆ.
ಕಳೆದ ಬಾರಿ ಸಾ.ರಾ.ಮಹೇಶ್ ಜತೆಗೂಡಿ ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧಿಸಿಕೊಂಡಿದ್ದು, ಈ ಬಾರಿ ಕೆ.ಆರ್.ನಗರದ ಎ.ಟಿ.ಸೋಮಶೇಖರ್ ಸಾ.ರಾ.ಮಹೇಶ್ ಬಣದಲ್ಲಿದ್ದಾರೆ. ಉಳಿದವರು ಜಿ.ಟಿ.ದೇವೇಗೌಡರೊಂದಿಗೆ ಗುರುತಿಸಿಕೊಂಡಿರುವುದರಿಂದ ಮತ್ತೊಮ್ಮೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ.ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ನಾಮ ನಿರ್ದೇಶಿತ ಸದಸ್ಯ ಎಸ್.ಸಿ.ಅಶೋಕ್ ಅವರೇ ಅಧ್ಯಕ್ಷ ಸ್ಥಾನಕ್ಕೆ ಯತ್ನಿಸಿದ್ದರು. ಈ ವೇಳೆ ಖುದ್ದು ಜಿ.ಟಿ.ದೇಬೇಗೌಡರು ಮಧ್ಯಪ್ರವೇಶಿಸಿ ಸಿಎಂ ಅವರನ್ನು ಮನವೊಲಿಸುವ ಮೂಲಕ ತಮ್ಮ ಆಪ್ತ ಎಸ್.ಸಿದ್ದೇಗೌಡರನ್ನು ಅಧ್ಯಕ್ಷರನ್ನಾಗಿಮಾಡುವಲ್ಲಿ ನೋಡಿಕೊಂಡಿದ್ದರು.ಈಗ ಮತ್ತೆ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಮೈಮುಲ್ನ ಆಡಳಿತ ಹಿಡಿಯಲು ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ.
1033 ಮತದಾರರು
ಮೈಸೂರು,ನಂಜನಗೂಡು,ನರಸೀಪುರ, ಎಚ್.ಡಿ.ಕೋಟೆ,ಹುಣಸೂರು,ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕಿನಿಂದ ಒಟ್ಟು ೧೦೩೩ ಮಂದಿ ಮತದಾರರು ಇದ್ದಾರೆ. ಮಹಿಳಾ ಹಾಗೂ ಪುರುಷ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
ಅವಧಿ ಮುಗಿದ ತಕ್ಷಣ ಚುನಾವಣೆ ನಡೆಸಲು ದಿನಾಂಕ ಪ್ರಕಟವಾಗಬೇಕಿತ್ತಾದರೂ ಈತನಕ ಆಗಿಲ್ಲ. ನಮಗೆ ಬಂದಿರುವ ಮಾಹಿತಿ ಪ್ರಕಾರ ಡಿಸೆಂಬರ್ ಒಳಗೆ ಚುನಾವಣೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸಾರ್ವತ್ರಿಕ ಚುನಾವಣೆಗಳು, ಸಹಕಾರ ಬ್ಯಾಂಕ್ಗಳ ಚುನಾವಣೆ ನಡೆಯುತ್ತಿರುವುದರಿಂದ ಮೈಮುಲ್ ಚುನಾವಣೆ ನಡೆಸಲು ಯಾವ ಅಡ್ಡಿ,ಆತಂಕವಿಲ್ಲ ಎಂದು ಮೈಮುಲ್ ಮಾಜಿ ನಿರ್ದೇಶಕ ಎ.ಟಿ.ಸೋಮಶೇಖರ್ ತಿಳಿಸಿದ್ದಾರೆ.
Key words: mymul-election-former minister-GT devegowda- supporters-soon – announced – date…