ಸ್ವಚ್ಛ ಸರ್ವೇಕ್ಷಣಾ ಅಭಿಯಾನ: ಮೈಸೂರು ನಗರ ಟಾಪ್ 10ರೊಳಗೆ ತರಲು ಪಣ- ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್

ಮೈಸೂರು,ಏಪ್ರಿಲ್,11,2025 (www.justkannada.in):  ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಹಿನ್ನಲೆ, ಸ್ವಚ್ಛ ನಗರಿ ಗರಿಮೆ ಮತ್ತೊಮ್ಮೆ ಮುಡಿಗೇರಿಸಿಕೊಳ್ಳಲು ಮೈಸೂರು ಪಾಲಿಕೆ ಪಣ ತೊಟ್ಟಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ತಿಳಿಸಿದರು.

ಈ ಕುರಿತು ಮಾತನಾಡಿದ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ , ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಈಗಾಗಲೇ ಒಂದು ಭಾಗ ಮುಗಿಸಿ ಎರಡನೇ ಹಂತಕ್ಕೆ ಕಾಲಿಟ್ಟಿದ್ದೇವೆ. ನೀರು ಮತ್ತು ಕಸ ವಿಂಗಡಣೆ ವಿಚಾರದಲ್ಲಿ ರೇಟಿಂಗ್ ಪ್ರಕ್ರೀಯೆ ನಡೆಯುತ್ತಿದೆ.  27ನೇ ಸ್ಥಾನಕ್ಕೆ ಕುಸಿತ ಕಂಡಿದ್ದ ಮೈಸೂರು ನಗರವನ್ನ ಟಾಪ್ 10 ರೊಳಗೆ ತೆಗೆದುಕೊಂಡು ಹೋಗುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ನಾಗರಿಕರು ಧನಾತ್ಮಕವಾಗಿ ಸಹಕರಿಸಬೇಕು. ರಸ್ತೆಗಳಲ್ಲಿ ಕಸ ಬೀಸಾಡುವುದನ್ನ ನಿಲ್ಲಿಸಬೇಕು. ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು  ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಈಗಾಗಲೇ ಸಾರ್ವಜನಿಕ ಆಸ್ತಿ ಮೇಲಿನ ತೆರಿಗೆ ಪಾವತಿಗೆ ಪ್ರತಿ ವರ್ಷದಂತೆ ಈ ವರ್ಷವೂ 5% ವಿನಾಯಿತಿ ನೀಡಲಾಗಿದೆ. ಮೈಸೂರಿನ ಜನರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಿ. ಇದರಿಂದ ನಿಮಗೂ ಅನುಕೂಲವಾಗುತ್ತದೆ. ಪಾಲಿಕೆ ಆದಾಯಕ್ಕೂ ಅನುಕೂಲವಾಗುತ್ತದೆ. ಸದ್ಯ ನಗರದಲ್ಲಿ ಎದುರಾಗಿರುವ ಕಲುಷಿತ ನೀರಿನ ಸಮಸ್ಯೆಯನ್ನ ಸರಿಪಡಿಸುತ್ತಿದ್ದೇವೆ. ನಗರದ ಆಸ್ಪತ್ರೆಗಳಲ್ಲಿ ಕಳೆದ ವರ್ಷ ಆಗಿರುವ ಪ್ರಕರಣ ಬಗ್ಗೆ ಅಧ್ಯಯನ ನಡೆಸಿ ಎಲ್ಲಿ ಸಮಸ್ಯೆ ಆಗಿದೆ ಅಲ್ಲಿ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ನಗರದ ಎಲ್ಲೇಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತೋ ಅಲ್ಲಿ ಕ್ರಮ ವಹಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು  ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಹೇಳಿದರು.

ಮಳೆಗಾಲ ಆರಂಭವಾದ ಹಿನ್ನಲೆ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಬೀಳುವ ಹಂತದಲ್ಲಿರುವ ಮರಗಳ ವೈಜ್ಞಾನಿಕ ರೀತಿಯಲ್ಲಿ ತೆರವು ಮಾಡಬೇಕಾಗುತ್ತದೆ. ಈಗಾಗಲೇ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲವನ್ನೂ ಮಾಡುತ್ತೇವೆ. ನಮ್ಮ ಯಂತ್ರಗಳನ್ನ ಬಳಸಿ ಹೂಳು ತೆಗೆಯುವ ಕೆಲಸ ಮಾಡಲಾಗುತ್ತದೆ. ಅವಶ್ಯಕತೆ ಇದ್ದರೆ ಟೆಂಡರ್ ಮೂಲಕ ಕೆಲಸ ನಿರ್ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಹೇಳಿದರು.

Key words: Clean Survey Campaign, Mysore City, Corporation, Commissioner