ಮೈಸೂರು,ಮಾರ್ಚ್,26,2021(www.justkannada.in): ಮೈಸೂರು ರಿಂಗ್ ರಸ್ತೆಯಲ್ಲಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಆರ್ ಟಿಐ ಕಾರ್ಯಕರ್ತರೊಬ್ಬರು ಪತ್ರ ಬರೆದಿದ್ದಾರೆ.
22 -3-2021 ರಂದು ಮೈಸೂರಿನ ರಿಂಗ್ ರಸ್ತೆಯಲ್ಲಿ ಪೊಲೀಸರ ತಪಾಸಣೆ ವೇಳೆ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ದೇವರಾಜು ಮೃತಪಟ್ಟಿದ್ದರು. ಘಟನೆಯಲ್ಲಿ ದೇವರಾಜು ಅವರ ಸ್ನೇಹಿತ ಸುರೇಶ್ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಗೆ ಪೊಲೀಸರೇ ಕಾರಣ ಎಂಬ ಆರೋಪವಿದೆ.
ಈ ಕುರಿತು ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗೃಹ ಸಚಿವರಿಗೆ ಪತ್ರ ಬರೆದಿರುವ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ, ದೇವರಾಜರ ಸಾವಿಗೆ ವಾಣಿವಿಲಾಸಪುರಂ ಪೊಲೀಸರ ಕಾರಣ ಎಂಬುದು ಸ್ಪಷ್ಟವಾಗಿ ಖಚಿತವಾಗುತ್ತದೆ, ಮೈಸೂರಿನ ಪೊಲೀಸರು ಸತ್ಯಾಂಶವನ್ನು ಮುಚ್ಚಿ ಹಾಕಿ, ನಿಜವಾದ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಖಚಿತವಾಗುತ್ತದೆ. ಹೀಗಾಗಿ ಮೈಸೂರುನಗರದ ವಾಣಿವಿಲಾಸಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 48/2021 ಸಂಖ್ಯೆಯ ಪ್ರಕರಣವನ್ನು ಕೂಡಲೇ ಸಿ.ಐ.ಡಿಗೆ ವರ್ಗಾವಣೆ ಮಾಡಬೇಕು, ದೇವರಾಜ್ ಎಂಬುವವರ ಸಾವಿಗೆ ಕಾರಣಕರ್ತರಾದ ಸದರಿ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು, ಮೃತ ದೇವರಾಜನ ಸಾವಿಗೆ ನಿಮ್ಮ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರಣವಾಗಿರುವುದರಿಂದ ದೇವರಾಜರವರ ಕುಟುಂಬದವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
Key words: mysore- accidenrt-case- RTI activist – letter- home minister – action- against -Mysore police