ಮೈಸೂರು ಡಿಸೆಂಬರ್,14,2024 (www.justkannada.in): ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಮೈಸೂರು ತಾಲೂಕಿನ ಉಸ್ತುವಾರಿ ಅಧಿಕಾರಿಯಾಗಿರುವ ಡಾ. ಪಿ .ಶಿವರಾಜು ಅವರು ಇಂದು ಮೈಸೂರು ನಗರದ ಶಾಂತಿ ನಗರದಲ್ಲಿನ ನಗರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ರೋಗಿಗಳೊಂದಿಗೆ ಹಾಗೂ ಅವರ ಸಂಬಂಧಿಕರೊಂದಿಗೆ ಆಸ್ಪತ್ರೆಯ ಸೇವೆಯ ಬಗ್ಗೆ ಅಪರ ಜಿಲ್ಲಾಧಿಕಾರಿ ಶಿವರಾಜು ಅವರು ಚರ್ಚೆ ನಡೆಸಿದರು. ಎರಡು ದಿನಗಳ ಹಿಂದೆ ಕಂಡುಬಂದಿದ್ದ ಕಾಲರಾ ಬಗ್ಗೆ ಹಾಗೂ ಕುಡಿಯುವ ನೀರಿನ ಕಾರಣದಿಂದ ಉಂಟಾಗಿದ್ದ ವಾಂತಿ-ಭೇದಿ ಪ್ರಕರಣಗಳ ಬಗ್ಗೆ ಇಂದು ಪರಿಶೀಲನೆ ನಡೆಸಿ ಹಾಜರಿದ್ದ ವೈದ್ಯರಿಂದ ವಿವರಣೆಯನ್ನು ಪಡೆದು ಸೂಕ್ತ ಮಾರ್ಗದರ್ಶನವನ್ನು ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸಬಾರದು ಆ ರೀತಿಯಲ್ಲಿ ಮುಂಜಾಗ್ರತೆಯನ್ನು ವಹಿಸಬೇಕು ಎಂದು ಮಾರ್ಗದರ್ಶನ ನೀಡಿದರು.
ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ವೈದ್ಯಕೀಯ ತಪಾಸಣೆ ನಡೆಸಿ ಅವರ ಆರೋಗ್ಯ ಸುಧಾರಿಸುವಲ್ಲಿ ಕ್ರಮ ವಹಿಸಬೇಕೆಂದು ಸೂಚಿಸಿದರು.
ಶುದ್ಧಕುಡಿಯುವ ನೀರಿನ ಬಗ್ಗೆ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಕೂಡಲೇ ಭೇಟಿಮಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ವೆಂಕಟೇಶ್ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Key words: mysore, ADC, visits, Primary Health Center