ಮೈಸೂರು, ಜ. 20, 2020 (www.justkannada.in news ) ವಿಶ್ವಾಸ ದ್ರೋಹ ಹಾಗೂ ವಂಚನೆಯ ಪ್ರಕರದಲ್ಲಿ ಮೈಸೂರಿನ ವಕೀಲ ಬೆಂಕಿ ಚಿದಾನಂದ್ ಅವರಿಗೆ ಮೈಸೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವು ಸೆರೆವಾಸ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ:
ಮೈಸೂರಿನ ವಕೀಲರಾದ ಬೆಂಕಿ ಚಿದಾನಂದ ಅವರು ಲಷ್ಕರ್ ಮೊಹಲ್ಲಾದ ಅಕ್ಬರ್ ರಸ್ತೆಯ ನಿವಾಸಿ ಕೆ.ರಾಘು ಅವರಿಂದ 07.05.2012 ರಂದು 20 ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು.
ಆ ಸಾಲದ ಮರುಪಾವತಿಗಾಗಿ ದಿವಾನ್ಸ್ ರಸ್ತೆಯ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಬ್ಯಾಂಕಿನ 20 ಸಾವಿರ ಮೊತ್ತದ ಚೆಕ್ ಒಂದಕ್ಕೆ ಸಹಿ ಮಾಡಿ ಕೆ.ರಾಘು ಅವರಿಗೆ ನೀಡಿದ್ದರು.
ಸದರಿ ಚೆಕ್ಕನ್ನು ರಾಘು ಅವರು ಬ್ಯಾಂಕಿಗೆ ಹಾಜರು ಪಡಿಸಿದಾಗ ಚೆಕ್ಕಿನಲ್ಲಿ ಇರುವ ಸಹಿ ತಾಳೆಯಾಗುವುದಿಲ್ಲವೆಂದು ಚೆಕ್ ಬೌನ್ಸ್ ಆದುದರಿಂದ ದಿನಾಂಕ 05.01.2016ರಂದು ಕೆ.ರಾಘು ಅವರು ಬೆಂಕಿ ಚಿದಾನಂದ ಅವರ ಮನೆಯ ಬಳಿ ಹೋಗಿ ಚೆಕ್ ಬೌನ್ಸ್ ಆದ ವಿಚಾರ ತಿಳಿ ಹಣ ವಾಪಾಸು ನೀಡುವಂತೆ ಕೇಳಿದಾಗ ಬೆಂಕಿ ಚಿದಾನಂದ, ಅವರ ಪತ್ನಿ ಹಾಗೂ ಪುತ್ರ ಸೇರಿಕೊಂಡು ಕೆ.ರಾಘುವರನ್ನು ಅವಾಚ್ಯವಾಗಿ ನಿಂದಿಸಿ,ತಾನು ತನ್ನ ಪತ್ನಿಯ ಖಾತೆಯ ಚೆಕ್ಕಿಗೆ ಸಹಿ ಹಾಕಿ ನೀಡಿರುವುದಾಗಿಯೂ ಈ ವಿಚಾರವಾಗಿ ಕೇಳಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರೆಂದು ಆರೋಪಿಸಿ ರಾಘು ಅವರು ವಿದ್ಯಾರಣ್ಯಪುರಂ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ವಿದ್ಯಾರಣ್ಯ ಪುರಂ ಪೊಲೀಸರು ವಕೀಲ ಬೆಂಕಿ ಚಿದಾನಂದ್,ಅವರ ಪತ್ನಿ ಗಿರಿಜಾಂಬಾ ಹಾಗೂ ಅವರ ಪುತ್ರ ಸ್ನೇಹಿತ್ ವಿರುದ್ಧ ಭಾರತ ದಂಡ ಸಂಹಿತೆಯ ಕಲಂ 406,420,411 ಹಾಗೂ 504 ಅನ್ವಯ ದೋಷಾರೋಪಣೆ ಮಾಡಿ ಮೈಸೂರಿನ ಒಂದನೇ ಹೆಚ್ಚುವರಿ ಸಿ.ಜೆ.ಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಅವರು ತೀರ್ಪು ನೀಡಿ ಬೆಂಕಿ ಚಿದಾನಂದ್ ಅವರು ರಾಘು ಅವರಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ಪತ್ನಿಯ ಚೆಕ್ಕಿಗೆ ತಾನೇ ಸಹಿ ಮಾಡಿ ಆ ಚೆಕ್ಕನ್ನು ಭದ್ರತೆಗೆಂದು ರಾಘು ಅವರಿಗೆ ನೀಡಿದ ಅಂಶಗಳು ಸಾಬೀತಾದ ಹಿನ್ನೆಲೆಯಲ್ಲಿ ಐ ಪಿ ಸಿ ಸೆಕ್ಷನ್ 420,467 ಹಾಗೂ 471 ಅನ್ವಯ ಬೆಂಕಿ ಚಿದಾನಂದ್ ಅವರಿಗೆ ಮೂರು ವರ್ಷಗಳ ಸೆರೆವಾಸ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸುವುದರ ಜೊತೆಗೆ ಕೆ.ರಾಘು ಅವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರ ಮೂರ್ತಿ ವಾದ ಮಂಡಿಸಿದ್ದರು.
Key words : mysore-advocate-benki.chidananda-court