ಆಂದೋಲನ 50 : ರಾಜಶೇಖರಗೆ ಗಣ್ಯರ ‘ಕೋಟಿ’ ನಮನ

Mysore-andolana-newspaper-50-years

ಮೈಸೂರು, ಜು.06, 2022 : (www.justkannada.in news) ಮೈಸೂರಿನ ಪ್ರಾದೇಶಿಕ ಪತ್ರಿಕೆ “ಆಂದೋಲನ’ ದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು, ಪತ್ರಿಕೆ ಸ್ಥಾಪಕ, ಸಂಪಾದಕ ದಿವಂಗತ ರಾಜಶೇಖರಕೋಟಿ ಅವರ ವೃತ್ತಿಧರ್ಮ ಸ್ಮರಿಸಿದರು.

50 ವರ್ಷಗಳ ಹಿಂದೆ ಪತ್ರಿಕೆ ಆರಂಭಿಸಿದಾಗ ಎದುರಿಸಿದ ಸಮಸ್ಯೆಗಳು, ಸವಾಲುಗಳ ಬಗ್ಗೆ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಬೆಳಕು ಚೆಲ್ಲಿದರು. ಜತೆಗೆ ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ರಾಜಶೇಖರ ಕೋಟಿ ಅವರು ವೃತ್ತಿಧರ್ಮ ಮರೆಯದೆ ಕಾರ್ಯನಿರ್ವಹಿಸಿದರು. ಎಡಪಂಥೀಯರಾದರು, ಸುದ್ದಿ ವಿಷಯದಲ್ಲಿ ವಸ್ತುನಿಷ್ಠವಾಗಿದ್ದರು ಎಂದು ಶ್ಲಾಘಿಸಿದರು.

ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ನಟ ಡಾ.ಶಿವರಾಜ್ ಕುಮಾರ್, ಹಿರಿಯ ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್, ಆಂದೋಲನ ಪತ್ರಿಕೆ ಸಹಸಂಪಾದಕಿ ನಿರ್ಮಲಾ ಕೋಟಿ ಉಪಸ್ಥಿತರಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಾಧ್ಯಮಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ವಸ್ತುನಿಷ್ಠ ಸುದ್ದಿ ಪ್ರಕಟಿಸಬೇಕು. ಆದರೆ, ಕೆಲ ಮಾಧ್ಯಮಗಳು ರೋಚಕ ಸುದ್ದಿಗೆ ಮಹತ್ವ ಕೊಡುತ್ತಿವೆ. ಗಂಡ – ಹೆಂಡತಿ ಜಗಳವನ್ನು ಇಡೀ ದಿನ ತೋರಿಸುತ್ತಾರೆ. ಅದರಿಂದ ಸಮಾಜಕ್ಕೆ ಏನೂ ಪ್ರಯೋಜನ ಹೇಳಿ ಎಂದು ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದಾಗ ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ಟಿವಿಗಳ ಪಾಲಿಗೆ ದೊಡ್ಡ ಸುದ್ದಿ. ಅದರ ಮೇಲೆಯೆ ಚರ್ಚೆಗಳು ನಡೆದವು. ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಒಬ್ಬ ನಾನು ಬಜೆಟ್ ಮಂಡಿಸೋದೇ ಡೌಟು ಎಂದ್ರೆ, ಮತ್ತೊಬ್ಬ ಬಜೆಟ್ ಮಂಡಿಸುತ್ತಾರೆ, ಆದರೆ ಸರಕಾರ ಉಳಿಯೋದು ಡೌಟು ಎಂದು ಭವಿಷ್ಯ ನುಡಿದಿದ್ದ. ಇಂಥ ಅವೈಜ್ಞಾನಿಕ ಚರ್ಚೆಗಳಿಂದ ಕಾಲಾಹರಣವೆ ಹೊರತು ಸಮಾಜಕ್ಕೇನು ಉಪಯೋಗವಾಗದು ಎಂದು ಕಿವಿಮಾತು ಹೇಳಿದರು.

ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಅನ್ನುವ ಬಗೆಗೂ ಚರ್ಚೆ ನಡೆಸುತ್ತಾರೆ. ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಬಂದೆ. ಸಿಎಂ ಸ್ಥಾನ ಕಳೆದುಕೊಂಡನಾ..? ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯಾದ್ಯಂತ ಹಲವಾರು ಪ್ರಾದೇಶಿಕ ಪತ್ರಿಕೆಗಳು ಇವೆ‌. ಆದರೆ ಕೆಲವೇ ಪತ್ರಿಕೆಗಳು ಮಾತ್ರ ಮುಖ್ಯ ವಾಹಿನಿಯ ಪತ್ರಿಕೆಗಳ ಮಾದರಿಯಲ್ಲಿ ಹೊರ ಬರುತ್ತಿವೆ‌. ಪ್ರಾದೇಶಿಕ ಸುದ್ದಿಗಳಿಗೆ ಹೆಚ್ಚಿನ ಆದ್ಯತೆಯನ್ನು ಪ್ರಾದೇಶಿಕ ಪತ್ರಿಕೆಗಳು ನೀಡುತ್ತಿವೆ. ಜಾಗತೀಕರಣ, ಉದಾರೀಕರಣದ ನಡುವೆ ಅಂತಃಕರಣ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಎಲ್ಲವನ್ನು ಪೂರ್ವಾಗ್ರಹ ಪೀಡಿತವಾಗಿ ನೋಡಬಾರದು, ವಸ್ತು ನಿಷ್ಠವಾಗಿಯೂ ನೋಡುವ ಅವಶ್ಯಕತೆ ಇದೆ. ಪತ್ರಿಕೋದ್ಯಮದಲ್ಲಿ ತಾಂತ್ರಿಕವಾಗಿ ಭಾರೀ ಬದಲಾವಣೆಯಾಗಿದೆ. ಯಾರು ಏನೇ ಹೇಳಿದರೂ ಜನರು ಕೂಡಾ ಚಿಂತನೆ ಮಾಡುತ್ತಾರೆ. ಏನ್ ಹೇಳಿದ್ರು ಅನ್ನುವುದಕ್ಕಿಂತ ಯಾರು, ಏನು ಹೇಳಿದ್ರು ಅನ್ನೋದು ಮುಖ್ಯವಾಗುತ್ತದೆ ಎಂದರು.

ರಾಜಕಾರಣಿಗಳು ಪತ್ರಿಕೆ ನಡೆಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ರಾಜಕಾರಣಿಗಳಿಗೂ ಪತ್ರಿಕೋದ್ಯಮಕ್ಕೂ ಆಗಿ ಬರುವುದಿಲ್ಲ. ಮುಖ್ಯಮಂತ್ರಿಗಳಾಗಿದ್ದ ವಿರೇಂದ್ರ ಪಾಟೀಲ್, ಗುಂಡೂರಾವ್ ಈ ನಿಟ್ಟಿನಲ್ಲಿ ಪ್ರಯತ್ನಿಸಿ ವಿಫಲರಾದರು ಎಂದು ಸಿಎಂ ಬೊಮ್ಮಾಯಿ, ಉದ್ಯಮಿಗಳು ರಾಜಕೀಯಕ್ಕೆ ಬಂದರೆ ಅಪಾಯ ಎಂದು ಹೇಳಲಾಗುತ್ತಿತ್ತು. ಆದರೀಗ ರಾಜಕಾರಣಿಗಳೇ ಉದ್ಯಮಿಗಳಾಗುತ್ತಿದ್ದಾರೆ. ಇದು ಮತ್ತಷ್ಟು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

key words : Mysore-andolana-newspaper-50-years