ಮೈಸೂರು,ಮೇ,9,2024 (www.justkannada.in): ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಕೆರೆ ಕಾಮಗಾರಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಪ್ರಾರಂಭಿಸಲಾಗಿರುವ ಕೂಸಿನ ಮನೆ ಸ್ಥಳಕ್ಕೆ ಅಪರ ಮುಖ್ಯ ಕಾರ್ಯದರ್ಶಿಯವರಾದ ಅಂಜುಂ ಪರ್ವೇಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಳಿಕೆರೆ ಗ್ರಾಮ ಪಂಚಾಯಿತಿಯ ಪಟ್ಟಲದಮ್ಮನ ಕೆರೆ ಅಭಿವೃದ್ಧಿ, ಮಲ್ಲಿನಾಥಪುರದ ಮಲ್ಲಿನಾಥಪುರ ಕೆರೆ ಅಭಿವೃದ್ಧಿ ಹಾಗೂ ದುಡಿಯುವ ಗ್ರಾಮೀಣ ಭಾಗದ ಮಹಿಳೆಯರಿಗೆ ಅನುಕೂಲವಾಗಲೆಂದು ಪ್ರಾರಂಭವಾಗಿರುವ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಲದಮ್ಮನ ಕೆರೆ ಸ್ಥಳಕ್ಕೆ ಭೇಟಿ ನೀಡಿ ಈ ಹಿಂದೆ ಇದ್ದಂತಹ ಕೆರೆ ಪರಿಸ್ಥಿತಿ ಹಾಗೂ ಪ್ರಸ್ತುತ ವಾಸ್ತವತೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿಯಾಗಿ ಗ್ರಾಮೀಣ ಭಾಗದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು. ಬಳಿಕ ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಹಾಗೂ ನೀಡಲಾಗುತ್ತಿರುವ ಆಹಾರದ ಕುರಿತು ಮಾಹಿತಿ ಪಡೆದುಕೊಂಡರು.
ಮಲ್ಲಿನಾಥಪುರ ಗ್ರಾಮದ ಮಲ್ಲಿನಾಥಪುರ ಕೆರೆ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರೊಂದಿಗೆ ನರೇಗಾ ಯೋಜನೆಯ ಪ್ರಯೋಜನ ಕುರಿತು ಸಂವಾದ ನಡೆಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ.ಗಾಯಿತ್ರಿ, ಉಪ ಕಾರ್ಯದರ್ಶಿ ಜಗನ್ನಾಥ್ ಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಅಭಿಯಂತರ ರಂಜಿತ್ ಕುಮಾರ್, ಮಹಮ್ಮದ್ ಖಲೀಂ, ಮ-ನರೇಗಾ ಸಹಾಯಕ ನಿರ್ದೇಶಕ ಗಿರಿಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಂ.ಮಹದೇವಸ್ವಾಮಿ, ತಾಂತ್ರಿಕ ಸಂಯೋಜಕ ಅರವಿಂದ್, ಐಇಸಿ ಸಂಯೋಜಕ ಪುಷ್ಪ, ತಾಂತ್ರಿಕ ಸಹಾಯಕ ಇಂಜಿನಿಯರ್ ನವೀನ್ ಜೆ, ಬಿಎಫ್ಟಿ ಮಹದೇವ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಉಪಸ್ಥಿತರಿದ್ದರು.
Key words: mysore, Anjum Parvez, inspected, lake, work