ಮೈಸೂರು,ಜನವರಿ,5,2022(www.justkannada.in): ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಬಂಡಿವಾಳ್ಯದಲ್ಲಿ ಅಂಗಡಿ ಮಳಿಗೆಗಳನ್ನು ಪಡೆದು ಅನಧಿಕೃತವಾಗಿ “ಕೃಷಿಯೇತರ” ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದು ಈ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಿ ಕೃಷಿಯೇತರ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ/ ಸಮಿತಿ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರ ಜತೆಗೆ ಆ ಅಂಗಡಿ ಮಳಿಗೆಗಳನ್ನ ಮರುಹಂಚಿಕೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ರವೀಂದ್ರ ಎಂ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ರವೀಂದ್ರ ಎಂ. ನೇತೃತ್ವದಲ್ಲಿ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಲಾಯಿತು.
ಮೈಸೂರಿನ ಬಂಡಿಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಸಗಟು ಮಾರಾಟದ ನೆಪವೊಡ್ಡಿ. ಆ ಪ್ರಕಾರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೈಸೂರು ಇಲ್ಲಿಂದ ಲೈಸೆನ್ಸ್ ಪಡೆದು ಸದರಿಯನ್ನು ಬಳಸಿಕೊಂಡು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ , ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ದಲ್ಲಾಳಿ, ಮಾರಾಟಗಾರರು, ವರ್ತಕರು ಎಂಬ ನೆಪ ಒಡ್ಡಿ ನಿವೇಶನ ಕೋರಿ ಅರ್ಜಿ ಸಲ್ಲಿಸಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೈಸೂರು ಇಲ್ಲಿಂದ ಲೀಸ್ ಕಂ ಸೇಲ್ ಆಧಾರದಲ್ಲಿ ವರ್ತಕರು ನಿವೇಶನ ಅಂಗಡಿಗಳನ್ನು ಪಡೆದುಕೊಂಡಿರುತ್ತಾರೆ. ಈ ರೀತಿ ಲೀಸ್ ಕ0 ಸೇಲ್ ಆಧಾರದಲ್ಲಿ ಪಡೆದುಕೊಂಡ ಅಂಗಡಿಗಳಲ್ಲಿ ವರ್ತಕರು ಕೃಷಿಯೇತರ ವಸ್ತುಗಳನ್ನು ಅಂದರೆ ಪ್ಲಾಸ್ಟಿಕ್ ಪದಾರ್ಥಗಳು, ಫಿನಾಯಿಲ್, ಕೂಲಿಂಕ್ಸ್ ಗಳು, ಎಣ್ಣೆ, ತುಪ್ಪ, ಚಿಪ್ಸ್, ಕುರುಕುರೆ, ಹೀಗೆ ಇತ್ಯಾದಿ ಪದಾರ್ಥಗಳನ್ನು ಚಿಲ್ಲರೆ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. (ಇಲ್ಲಿ ಅನೇಕ ನಕಲಿ ಪದಾರ್ಥಗಳು ಸಹ ಮಾರಾಟವಾಗುತ್ತಿರುವುದು ಕಂಡುಬಂದಿದೆ). ಇದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾಯ್ದೆ ನಿಯಮಗಳಿಗೆ ವಿರುದ್ಧವಾಗಿದೆ. ಸದರಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಸಗಟಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದರು ಸಹ ಲಾಭದ ಆಸೆಗೆ ವರ್ತಕರು ಮಾರಾಟಗಾರರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪಡೆದ ಲೈಸನ್ಸ್ ಅನ್ನ ದುರ್ಬಳಕೆ ಮಾಡಿಕೊಂಡು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿವೇಶನ ಅಂಗಡಿಗಳನ್ನು ಅಕ್ರಮವಾಗಿ ಪಡೆದು ನಿಯಮಬಾಹಿರವಾಗಿ ಕೃಷಿಯೇತರ ಪದಾರ್ಥಗಳನ್ನು ಮಾರುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಹಾಗೆಯೇ ಈ ರೀತಿಯ ಅಕ್ರಮಕ್ಕೆ ಸ್ಥಳೀಯ ಸಮಿತಿಯ ಹಾಗೂ ಅಧಿಕಾರಿಗಳು ಪರೋಕ್ಷವಾಗಿ ಸಹಕರಿಸಿ ಕೃಷಿಯೇತರ ಪದಾರ್ಥಗಳ ಮಾರಾಟದಂತಹ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟು ಅಕ್ರಮವೆಸಗಿ , ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿರುವುದು ಕಂಡುಬಂದಿದೆ. ಅದ್ದರಿಂದ ಈ ಕೂಡಲೇ ಈ ದೂರಿನ ವಿಚಾರಣೆ ಮಾಡಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರೊಂದಿಗೆ ಅಕ್ರಮ ಎಸಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿರುದ್ಧವೂ ಸಹ ಕ್ರಮ ಜರುಗಿಸಬೇಕು. ಮತ್ತು ಸದರಿ ಅಂಗಡಿ ಮಳಿಗೆಗಳನ್ನು ಗುರುತಿಸಿ ಸಮಿತಿಗೆ ವಂಚಿಸಿರುವ ಅವರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರೊಂದಿಗೆ ಅವರುಗಳಿಂದ ಅಂಗಡಿ ಮಳಿಗೆಗಳನ್ನು ವಶಪಡಿಸಿಕೊಂಡು ಸ್ವಾಧೀನಕ್ಕೆ ಪಡೆದು ನೈಜವಾಗಿ ಕೃಷಿ ಉತ್ಪನ್ನ ಮಾರಾಟ ಮಾಡುವವರಿಗೆ ವರ್ತಕರಿಗೆ ಮರುಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Key words: mysore-APMC- non-agricultural –commodities- Complaint