ಮೈಸೂರು,ಸೆ,1,2019(www.justkannada.in): ದೇಶದಲ್ಲಿ ವೈಭವ ಸಂಭ್ರಮದಿಂದ ಆಚರಿಸುವ ಹಬ್ಬ ಗೌರಿ ಗಣೇಶ ಹಬ್ಬ, ಭಾವೈಕ್ಯತೆ ಒಗ್ಗಟ್ಟಿನ ಸಂದೇಶ ಸಾರುವ ಈ ಹಬ್ಬದಲ್ಲಿ ಗಣೇಶನನ್ನ ಕೂರಿಸಿ ಪೂಜೆ ಸಲ್ಲಿಸುವುದು ನಂತರ ಗಣೇಶ ವಿಸರ್ಜನೆ ಮಾಡುವುದು ನಡೆದುಕೊಂಡು ಬಂದಿರುವ ಪದ್ದತಿ. ಗಣೇಶ ಹಬ್ಬ ಬಂತೆಂದರೇ ಸಾಕು ಕಲಾವಿದರು ತಮ್ಮ ಕೈಚಳಕದಲ್ಲಿ ವಿವಿಧ ರೀತಿಯ ಗಣೇಶ ಮೂರ್ತಿಗಳನ್ನ ಮಾಡಿ ಮಾರಾಟಕ್ಕಿಡುತ್ತಾರೆ.
ಈ ನಡುವೆ ಮೈಸೂರಿನ ಕಲಾವಿದರೊಬ್ಬರು ತಮ್ಮ ಕೈಚಳಕದಲ್ಲಿ ವಿನೂತನ ಗಣೇಶನನ್ನ ನಿರ್ಮಿಸಿದ್ದಾರೆ. ಹೌದು, ಗಣೇಶನ ಜತೆ ರಾಜಕೀಯ, ಕಲೆ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರದ ಗಣ್ಯರು ನಿಂತಿರುವಂತೆ ಕೆತ್ತನೆ ಮಾಡುವ ಮೂಲಕ ತಮ್ಮ ಕಲಾಚಾತುರ್ಯ ತೋರಿದ್ದಾರೆ.
ಮೈಸೂರು ಕಲಾವಿದರಾದ ರೇವಣ್ಣ ಎಂಬುವರು ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣೇಶನನ್ನ ಮಾಡುತ್ತಾರೆ, ಪ್ರಸ್ತುತ ವಿದ್ಯಮಾನಗಳ ಗಣ್ಯರು ರಾಜಕೀಯ ವ್ಯಕ್ತಿಗಳು ಗಣೇಶನೊಂದಿಗೆ ಇರುವಂತೆ ಬಿಂಬಿಸುವ ಗಣೇಶ ಮೂರ್ತಿಗಳನ್ನ ರಚಿಸುತ್ತಾರೆ.
ಅಂತೆಯೇ ಈ ಬಾರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಗಣೇಶನ ಜೊತೆ ನಿಲ್ಲಿಸಿರುವ ಕಲಾಕೃತಿಯ ಜೊತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಾರಿ ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಭೈರಪ್ಪ ಗಣೇಶನೊಂದಿಗೆ ನಿಂತಿರುವ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.
ಹಾಗೆಯೇ ಈ ವರ್ಷ ನಿಧನರಾದ ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಾಗೂ ಅನಂತ್ ಕುಮಾರ್ ಅವರ ಕಲಾಕೃತಿಯ ರೇವಣ್ಣ ಅವರ ಕೈಯಲ್ಲಿ ಮೂಡಿ ಬಂದಿದೆ. ಜತೆಗೆ ದೇಶಕ್ಕೆ ಕೀರ್ತಿ ತಂದ ಪಿ.ವಿ.ಸಿಂಧು ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಅವರು ಗಣೇಶನ ಜತೆ ನಿಂತಿರುವ ರೀತಿ ಗಣೇಶನನ್ನ ತಯಾರಿಸಿದ್ದಾರೆ. ರೇವಣ್ಣ ಅವರ ಕೈಚಳಕದಲ್ಲಿ ಮೂಡಿ ಬಂದಿರುವ ಗಣೇಶನನ್ನ ನೋಡಿದರೇ ಎಲ್ಲರೂ ಆಕರ್ಷಿತರಾಗುವುದು ಖಚಿತ.
Key words: Mysore- artist- Various –Ganesha- statue -Various -field -elites.