ಮೈಸೂರು,ಜ,9,2020(www.justkannada.in): ಹಲ್ಲೆ ಘಟನೆ ನಡೆದು ಎರಡು ತಿಂಗಳಾದರೂ ಸಹ ಶಾಸಕ ತನ್ವೀರ್ ಸೇಠ್ ಗೆ ಸರಿಯಾಗಿ ಇನ್ನು ಮಾತನಾಡಲು ಆಗುತ್ತಿಲ್ಲ. ಹೌದು ಹಲ್ಲೆ ವೇಳೆ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಧ್ವನಿಪೆಟ್ಟಿಗೆಗೆ ಹಾನಿಯಾಗಿತ್ತು. ಹೀಗಾಗಿ ತನ್ವೀರ್ ಸೇಠ್ ಅವರ ವಾಯ್ಸ್ ಸಂಪೂರ್ಣ ಬದಲಾಗಿದೆ.
ಗಡಸು ಧ್ವನಿಯಲ್ಲಿ ಅಬ್ಬರಿಸುತ್ತಿದ್ದ ಹಿರಿಯ ರಾಜಕಾರಣಿ ತನ್ವೀರ್ ಸೇಠ್ ಇದೀಗ ಧ್ವನಿ ಪೆಟ್ಟಿಗೆ ಹಾನಿಯಿಂದಾಗಿ ಕೀರಲು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಕೊಲೆ ಯತ್ನ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಶಾಸಕ ತನ್ವೀರ್ ಸೇಠ್ ಮಾತನಾಡಿದ್ದು ತನ್ವೀರ್ ಸೇಠ್ ಅವರ ಧ್ವನಿ ಕೇಳಿಸಿಕೊಂಡ ಬೆಂಬಲಿಗರಿಗೆ ಅಚ್ಚರಿ ಉಂಟಾಗಿದೆ. ಇನ್ನು ತನ್ವೀರ್ ಸೇಠ್ ಅವರ ವಾಯ್ಸ್ ಕೇಳಿ ಬೆಂಬಲಿಗರು ಮರುಕ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರು ಜಿಲ್ಲಾ ಕೇಂದ್ರ ಕಾರಗೃಹದಲ್ಲಿ ಆರೋಪಿಗಳ ಗುರುತು ಪತ್ತೆ ಕಾರ್ಯ ಬಳಿಕ ಮಾತನಾಡಿದ ಶಾಸಕ ತನ್ವೀರ್ ಸೇಠ್, ನನ್ನ ಧ್ವನಿ ಪೆಟ್ಟಿಗೆಗೆ ಇನ್ನು ಚಿಕಿತ್ಸೆ ನಡೆಯುತ್ತಿದೆ. ಇನ್ನು ಎರಡ್ಮೂರು ತಿಂಗಳ ಕಾಲ ಚಿಕಿತ್ಸೆ ಅವಶ್ಯಕತೆ ಇದೆ. ಈ ಘಟನೆ ಯಾವ ಜನಪ್ರತಿನಿಧಿಗಳಿಗು ಆಗಬಾರದು. ಇದು ಜನಪ್ರತಿನಿಧಿಗಳಲ್ಲಿ ಭಯ ಹುಟ್ಟಿಸುವ ಘಟನೆಯಾಗಿದೆ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ಭದ್ರತೆ ಬಹುಮುಖ್ಯ. ಜನರ ಆಶಿರ್ವಾದದಿಂದ ನಾನು ಬದುಕಿ ಬಂದಿದ್ದೇನೆ ಎಂದು ಹೇಳಿದರು.
ನನ್ನನ್ನ ನೋಡಲು ಬಂದ ಎಲ್ಲಾ ಪಕ್ಷದ ನಾಯಕರಿಗೆ ನಾನೆ ಖುದ್ದಾಗಿ ಕೃತಜ್ಞತಾ ಪತ್ರ ಬರೆದಿದ್ದೇನೆ. ಇಂತಹ ಘಟನೆ ಮರುಕಳಿಸಬಾರದು. ನನಗೆ ಅವತ್ತು ಏನಾಯ್ತು ಎಂಬುದು ಇನ್ನು ಗೊತ್ತಾಗುತ್ತಿಲ್ಲ. ಯಾರು ಹಲ್ಲೆ ಮಾಡಿದರು ಎಂಬುದು ನನಗೆ ಗೊತ್ತಾಗಲೆ ಇಲ್ಲ. ನನ್ನ ಜೊತೆಯಲ್ಲಿದ್ದವರು ಅವನನ್ನ ಹಿಡಿದಿದ್ದಾರೆ. ಆರೋಪಿ ಗುರುತು ಪತ್ತೆ ಕಾರ್ಯಮುಗಿಸಿದ್ದೇನೆ. ಇನ್ನು ಕೆಲ ಕಾಲ ವಿಶ್ರಾಂತಿ ಬೇಕಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.
ಆರೋಪಿಗಳ ಪತ್ತೆಕಾರ್ಯ ಮುಗಿಸಿ ಹೊರ ಬಂದ ಶಾಸಕ ತನ್ವೀರ್ ಸೇಠ್ ಗೆ ಅಭಿಮಾನಿಗಳು ಶೇರ್ ಹೈ ಶೇರ್ ಹೈ ತನ್ವೀರ್ ಸೇಠ್ ಶೇರ್ ಹೈ ಎಂದು ಜೈಕಾರ ಕೂಗಿದರು. ಈ ವೇಳೆ ಮಾತನಾಡದ ಸ್ಥಿತಿಯಲ್ಲಿದ್ದರೂ ಬೆಂಬಲಿಗರಿಗೆ ಶಾಸಕ ತನ್ವೀರ್ ಸೇಠ್ ಧನ್ಯವಾದ ಅರ್ಪಿಸಿದರು.
ಜೈಲಿನಿಂದ ಹೊರ ಬರುವ ವೇಳೆ ತನ್ವೀರ್ ಸೇಠ್ ನೋಡಲು ಮುಗಿಬಿದ್ದ ಅಭಿಮಾನಿಗಳು, ಕಾರಿಗೆ ಅಡ್ಡಹಾಕಿ ಕೈ ಮುಗಿದು ಜೈ ಕಾರ ಕೂಗಿದರು. ಇನ್ನು ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ವಿಚಾರಣೆ ಪೂರ್ಣಗೊಳಿಸಿದ ತನ್ವೀರ್ ಸೇಠ್ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಮನೆಗೆ ತೆರಳಿದರು.
Key words: mysore- assult case- MLA –Tanveer sait- voice-change