ಮೈಸೂರು,ಮಾರ್ಚ್,14,2023(www.justkannada.in): ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣದ ಬಗ್ಗೆ ಕ್ರೆಡಿಟ್ ವಾರ್ ಮುಂದುವರೆದಿದ್ದು, ಈ ಸಂಬಂಧ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ದಶಪಥ ರಸ್ತೆ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲ. ನಿಮ್ಮ ಮೂಲಕ ತಿಳಿಸುವ ಪ್ರಯತ್ನವಾಗಬೇಕು. ಒಂದು ಕಡೆ ಪ್ರತಾಪ್ ಸಿಂಹ ನಾನೇ ಇದರ ರುವಾರಿ ಅಂತಾರೆ. 2014 ರಲ್ಲಿ ನಾನು, ಧ್ರುವನಾರಾಯಣ್ ಎಂಪಿ ಆಗಿದ್ದವು. ಮೊದಲು ಇದು 4 ಪಥದ ರಸ್ತೆಯನ್ನು ಎಸ್. ಎಂ ಕೃಷ್ಣ ಅವರ ಕಾಲಾವಧಿಯಲ್ಲಿ ಅನುಮೋದನೆ ಸಿಕ್ಕಿತ್ತು. ನಂತರ ಎಚ್.ಸಿ ಮಹಾದೇವಪ್ಪ ಅವರು ಪಿಡಬ್ಲ್ಯುಡಿ ಸಚಿವರಾಗಿದ್ದಾಗ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಯುಪಿಎ ಸರ್ಕಾರದ ಮನಮೋಹನ್ ಸಿಂಗ್ ಈ ರಸ್ತೆ ಅಭಿವೃದ್ಧಿಗೆ ಅನುಮೋದನೆ ಕೊಟ್ಟಿದ್ದರು. ಈಗ ಇವರು ನಾವು ಮಾಡಿಸಿದ್ದು ಅಂತ ಬೊಗಳೆ ಹೊಡೆಯುತ್ತಿದ್ದಾರೆ. ಯಾರಪ್ಪನ ದುಡ್ಡು ತಂದು ಕೊಟ್ಟಿದ್ದೀರೀ.? ಜನರ ಬೆವರಿನ ದುಡ್ಡಿನಿಂದ ಮಾಡಿಸಿದ್ದು ಇದು ನಿಮ್ಮ ಮನೆಯಿಂದ ತಂದಿದ್ದ ದುಡ್ಡಲ್ಲ ಎಂದು ಬಿಜೆಪಿ ನಾಯಕರಿಗೆ ಖಡಕ್ ತಿರುಗೇಟು ನೀಡಿದರು.
3 ಕೋಟಿಯ ಇದ್ದದ್ದನ್ನು 12 ಸಾವಿರ ಕೋಟಿ ರೂ. ಗೆ ಏರಿಸಿ ಬಿಜೆಪಿ ಸರ್ಕಾರದಿಂದ ಲೂಟಿ..
ಬಿಜೆಪಿ ಅವರು ತಮ್ಮ ಮನೆಯಿಂದ ತಂದು ಮಾಡಿಸಿದ ಹಾಗೆ ಮಾತಾಡುತ್ತಾರೆ. ಯುಪಿಎ ಸರ್ಕಾರದಲ್ಲಿ ಸುಮಾರು 3 ಸಾವಿರ ಕೋಟಿಗೆ ಅನುಮೋದನೆ ಸಿಕ್ಕಿತ್ತು. ನಂತರ ಬಿಜೆಪಿ ಸರ್ಕಾರ 6 ಸಾವಿರ ಕೋಟಿಗೆ ತಂತು. ಈಗ 9 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಇದು ದಿಲಿಪ್ ಕನ್ಸ್ಟ್ರಕ್ಸನ್ ಕಡೆಯಿಂದ ಆಗುತ್ತಿದೆ. ಇವರು ಗಡ್ಕರಿ ಸಂಬಂಧಿ. 40% ಸರ್ಕಾರ ಕೊಟ್ಟರೆ ಇನ್ನು ಉಳಿದ 60 % ಹಣವನ್ನು ಟೋಲ್ ಮೂಲಕ ಸಂಗ್ರಹಿಸಲಾಗುತ್ತದೆ. ಇದೊಂದು ಅವೈಜ್ಞಾನಿಕ ರಸ್ತೆಯಾಗಿದೆ. ಸರ್ವಿಸ್ ರಸ್ತೆ ಇನ್ನೂ ಮಾಡಿಲ್ಲ ಆಗಲೇ ಟೋಲ್ ಸಂಗ್ರಹ ಮಾಡಲು ಮುಂದಾಗಿದ್ದಾರೆ. ಅರೆಬರೆ ಕಾಮಗಾರಿ ಆಗಿದ್ರು ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ. ಏನು ಅರ್ಜೆಂಟಿದೆ.? ಎಲ್ಲಾ ಕೆಲಸ ಮುಗಿಸಿ ಸಂಗ್ರಹ ಮಾಡಲಿ. ಇದು ಒಂದು ರೀತಿ ಜನರ ಹಣವನ್ನು ಲೂಟಿ ಮಾಡುತ್ತಿದೆ. 3 ಕೋಟಿಯ ಇದ್ದದ್ದನ್ನು 12 ಸಾವಿರ ಕೋಟಿ ರೂ. ಗೆ ಏರಿಸಿ ಬಿಜೆಪಿ ಸರ್ಕಾರ ಲೂಟಿ ಮಾಡಲು ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ರಸ್ತೆ ಮಧ್ಯ ನೂರಾರು ಹೋಟೆಲ್ ಬಾಗಿಲು ಹಾಕುತ್ತಿದ್ದಾವೆ. ಪೆಟ್ರೋಲ್ ಬಂಕ್ ಗಳು ಮುಚ್ಚಿಹೋಗುತ್ತಿವೆ. ಜನರ ಬದುಕಿನ ಜೊತೆ ಮೋದಿ ಸರ್ಕಾರ ಆಟ ಹಾಡುತ್ತಿದೆ. ಸಂಸದ ಪ್ರತಾಪ್ ಸಿಂಹಗೆ ಕಮಿಷನ್ ಎಷ್ಟು ಸಿಕ್ಕಿದೆ ತಿಳಿಸಬೇಕು. ಇದೇ ಮಾರ್ಚ್ 17 ರಂದು ಸಾಂಕೇತಿಕವಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸರ್ಕಲ್ ಬಳಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ನಡೆ ವಿರುದ್ಧ ಎಚ್ ವಿಶ್ವನಾಥ್ ಪ್ರತಿಭಟನೆಗೆ ಕರೆ ಕೊಟ್ಟರು.
1 ಕಿ.ಮೀ 1 ರೂ. ಟೋಲ್ ತೆಗೆದುಕೊಳ್ಳಿ. 118 ಕಿ.ಮೀ ಗೆ 118 ರೂ ತೆಗೆದುಕೊಳ್ಳಿ. ಎರಡೂ ಕಡೆಯಿಂದ ಈಗ ಸುಮಾರು 600 ರೂ. ಆಗುತ್ತೆ ಇದು ಸರಿಯಲ್ಲ. ಅರ್ಧ ಉದ್ಘಾಟನೆ ಅಷ್ಟೇ ಆಗಿರೋದು. ಇನ್ನೂ ಸಂಪೂರ್ಣವಾಗಿ ಕಾಮಗಾರಿ ಪೂರ್ಣವಾಗಿಯೇ ಇಲ್ಲ. ಇನ್ನೆಷ್ಟು ದಿನ ರಾಮನ ಹೆಸರಿನಲ್ಲಿ ವೋಟ್ ಕೇಳ್ತೀರಾ ಮಂಡ್ಯಕ್ಕೆ ಬಂದಾಗ ಇಲ್ಲಿ ಧ್ರುವನಾರಾಯಣ್ ಸಾವಾಗಿದ್ದರೂ ಸೌಜನ್ಯಕ್ಕಾದರೂ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ. ಅದ್ಯಾವುದೋ ಉರಿಗೌಡ, ನಂಜೇಗೌಡರ ಹೆಸರು ಹೇಳ್ಕೊಂಡು ಭಾವನಾತ್ಮಕ ವಿಚಾರ ತಂದು ಮತಬೇಟೆ ಕೆಲಸ ಮಾಡುತ್ತಿದೆ ಥೂ ನಿಮ್ಮ ಯೋಗ್ಯತೆಗೆ ಎಂದು ಬಿಜೆಪಿ ಸರ್ಕಾರ ಮತ್ತು ಬೊಮ್ಮಾಯಿ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಆರ್. ಧ್ರುವನಾರಾಯಣ್ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಾಯ.
ಹಾಗೆಯೇ ಆರ್. ಧೃವನಾರಾಯಣ್ ನಿಧನದ ಬಗ್ಗೆ ಮಾತನಾಡಿದ ಹೆಚ್.ವಿಶ್ವನಾಥ್, ನಮ್ಮನ್ನಗಲಿದ ಧ್ರುವನಾರಾಯಣ್ ನಾನು ಅವರು ಒಟ್ಟಿಗೆ ಸಂಸತ್ ಪ್ರವೇಶ ಮಾಡಿದೆವು. ಧೃವನಾರಾಯಣ್, ಬಹಳ ಕ್ರಿಯಾಶೀಲ ವ್ಯಕ್ತಿ. ಸಂಸದರಾಗಿ ಉತ್ತಮ ಕೆಲಸ ಮಾಡಿದ್ದವರು. ಅದರಲ್ಲೂ ಶಿಕ್ಷಣ, ಆರೋಗ್ಯ, ರಸ್ತೆಗಳ ಅಭಿವೃದ್ಧಿ ಮಾಡುವಲ್ಲಿ ಉತ್ತಮ ಕೆಲಸ ಮಾಡಿದ್ದರು. ಚಾಮರಾಜನಗರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದವರು. ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಸೋತರು ಛಲಬಿಡದ ನಾಯಕನಾಗಿ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಈಗ ಅವರ ನಿಧನದ ಬಳಿಕ ಅವರ ಮಗನಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ನಂಜನಗೂಡಿನಿಂದ ಟಿಕೆಟ್ ಗೆ ಒತ್ತಾಯ ಕೇಳಿ ಬಂದಿದೆ. ಇದನ್ನ ಪಕ್ಷದ ವರಿಷ್ಠರು ಮಾನ್ಯ ಮಾಡಬೇಕು. ನಂಜನಗೂಡಿಗೆ ಧ್ರುವನಾರಾಯಣ್ ಪುತ್ರನಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಎಚ್ ವಿಶ್ವನಾಥ್ ಹೇಳಿದರು.
Key words: Mysore-Bangalore- Highway -Credit War- BJP MLC- H.Vishwanath- Congress.