ಉಡುಪಿ, ಫೆಬ್ರವರಿ 16, 2020 (www.justkannada.in): ಉಡುಪಿ ಜಿಲ್ಲೆಯ ಮಾಳ ಸಮೀಪದ ಎಸ್ ಕೆ ಬಾರ್ಡರ್ ನಲ್ಲಿ ಬಸ್ ಅಪಘಾತ ಪ್ರಕರಣದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು
ಘಟನೆಯಲ್ಲಿ 31 ಪ್ರಯಾಣಿಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ಗಾಯಾಳುಗಳು ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ,ಇನ್ನೂ ಕೆಲವರನ್ನು ಮಣಿಪಾಲದ ಕೆಎಂಸಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಮೃತರಲ್ಲಿ ಬಹುತೇಕರು ಯುವಕ ಯುವತಿಯರೇ ಆಗಿದ್ದು ಕುಟುಂಬದವರ ರೋದನ ಮುಗಿಲು ಮುಟ್ಟಿದೆ .ವಿಷಯ ತಿಳಿದ ತಕ್ಷಣ ಮೃತರು ಮತ್ತು ಗಾಯಾಳುಗಳ ಮನೆಯವರು ಕಾರ್ಕಳಕ್ಕೆ ಧಾವಿಸಿ ಬಂದಿದ್ದಾರೆ.ಕುಟುಂಬಸ್ಥರು ಮೃತರ ಗುರುತು ಪತ್ತೆ ಮಾಡಿದ ತಕ್ಷಣ ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಉಡುಪಿ ಎಸ್ ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.ನಿನ್ನೆ ಸಂಜೆ 5.45 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿತ್ತು.
ಎಸ್ ಕೆ ಬಾರ್ಡರ್ ನಲ್ಲಿ ರಸ್ತೆ ತುಂಬ ಕಿರಿದಾಗಿದ್ದು ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ತಿರುವು ಇರುವುದು ಗಮನಕ್ಕೆ ಬಂದಿರಲಿಲ್ಲ.ಬಸ್ ನ ಬಲಭಾಗದಲ್ಲಿದ್ದ ಧರೆಯಿಂದ ಕೂಡಿದ ಬಂಡೆಗೆ ಬಸ್ ಸವರಿಕೊಂಡು ಹೋಗುವವರೆಗೂ ಚಾಲಕನ ಗಮನಕ್ಕೆ ಬಂದಿರಲಿಲ್ಲ.ಸುಮಾರು ಇಪ್ಪತ್ತು ಮೀಟರ್ ದೂರದ ತನಕ ಬಸ್ ಬಂಡೆಯನ್ನುಸವರಿಕೊಂಡೇ ಹೋಗಿದೆ.ಪರಿಣಾಮ ಭಾರೀ ದುರಂತ ನಡೆದುಹೋಗಿದೆ.ಬಲ ಬದಿಯಲ್ಲಿ ಕುಳಿತಿದ್ದ ಬಹುತೇಕ ಪ್ರಯಾಣಿಕರು ಸಾವನ್ನಪ್ಪಿದ್ದು ಹಲವರುಗಾಯಗೊಂಡಿದ್ದಾರೆ.
ಉಳಿದಂತೆ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಒಂದಲ್ಲೊಂದು ರೀತಿಯಲ್ಲಿಗಾಯಗಳಾಗಿವೆ.ಅಪಘಾತದ ರಭಸಕ್ಕೆ ಬಸ್ ಚಾಲಕ ಮತ್ತು ಚಾಲಕನ ಹಿಂದೆ ಕುಳಿತಿದ್ದ ಪ್ರಯಾಣಿಕರನ್ನು ಅಕ್ಷರಶಃ ಹಗ್ಗ ಕಟ್ಟಿ ಹೊರ ತೆಗೆಯಲಾಯಿತು.ಮೈಸೂರಿನ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪೆನಿಯ 35 ಮಂದಿ ಸಿಬ್ಬಂದಿ ಮತ್ತು ಇಬ್ಬರು ಚಾಲಕರು ಹಾಗೂ ಅಡುಗೆ ಸಿಬ್ಬಂದಿ ಸಹಿತ ಒಟ್ಟು 40 ಮಂದಿ ಬಸ್ ನಲ್ಲಿದ್ದರು.ರಾಧಾರವಿ 22 ,ಯೋಗೀಂದ್ರ 21,ಪ್ರೀತಂ ಗೌಡ 21,ಬಸವರಾಜ್ 22,ಅನಘ್ನಾ 20 ,ಶರಿಲ್ 21,ರಂಜಿತಾ ಪಿ.21 ಮೃತ ನತದೃಷ್ಟರು.ಇವರ ಜೊತೆ ಚಾಲಕ ಮತ್ತು ಅಡುಗೆ ಸಿಬಂದಿಯೂ ಮೃತ ಪಟ್ಟಿದ್ದರು.